ಮೈಸೂರು: ನಗರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಚಾಮರಾಜ ಕ್ಷೇತ್ರದ ಸಾರ್ವಜನಿಕರ ಕುಂದುಕೊರತೆ ಆಲಿಸಲು ಶಾಸಕ ಎಲ್.ನಾಗೇಂದ್ರ ಸೋಮವಾರ ಫೋನ್‌ಇನ್ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ಸುಮಾರು 40ಕ್ಕೂ ಹೆಚ್ಚು ಜನರು ಕರೆ ಮಾಡಿ ಯುಜಿಡಿ ಕಾಮಗಾರಿ, ಕುಡಿಯುವ ನೀರಿನ ಹೆಚ್ಚುವರಿ ಬಿಲ್ಲುಗಳು ಬರುತ್ತಿರುವುದು. ಕರೊನಾ ಸೋಂಕಿತ ವ್ಯಕ್ತಿಗಳ ಮನೆಯ ಸೀಲ್ಡೌನ್ ಮಾಡುವುದು. ಮಳೆಯ ನೀರು ನುಗ್ಗುತ್ತಿರುವ ಕುರಿತಂತೆ ಅಹವಾಲು ಸಲ್ಲಿಸಿದರು.
ಮಹದೇಶ್ವರ ಬಡಾವಣೆಯ ಚಾಮುಂಡೇಶ್ವರಿ ದೇವಸ್ಥಾನದ ಬಳಿ ಕುಡುಕರ ಹಾಗೂ ಬೃಂದಾವನ ಬಡಾವಣೆಯಲ್ಲಿ ಹಂದಿಗಳ ಹಾವಳಿ ಕುರಿತಂತೆ ಸವಿತಾ ಸಮಾಜದವರಿಗೆ ಸರ್ಕಾರದಿಂದ 5 ಸಾವಿರ ರೂ. ಸಹಾಯಧನ ಕೊಡಿಸುವಂತೆ ಕೆಲವರು ಕೋರಿದರು.
ಕುಂಬಾರಕೊಪ್ಪಲಿನ ಕಾಂಟೂರ್ ರಸ್ತೆಯ ಕೆಲ ನಿವಾಸಿಗಳು ಮನೆಯ ಹಕ್ಕುಪತ್ರ ನೀಡುವ ಕುರಿತಂತೆ ಕೇಳಿದರು. ತರಕಾರಿ ಮಾರಾಟಕ್ಕೆ ಅನುವು ಮಾಡಿಕೊಡಬೇಕು, ಜೋತು ಬಿದ್ದ ವಿದ್ಯುತ್ ತಂತಿ ಸರಿ ಪಡಿಸಬೇಕು, ಕೇರಗಳ್ಳಿ ಆಶ್ರಯ ಮನೆಗಳ ಮಂಜೂರಾಗಿ ಪತ್ರ ಕೊಡಿಸಬೇಕು, ಶುದ್ಧಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಬೇಕು ಎನ್ನುವುದು ಸೇರಿ ಇತರ ಸಮಸ್ಯೆಗಳನ್ನು ಮುಂದಿಟ್ಟರು.
ಮೇಟಗಳ್ಳಿ, ಮಂಜುನಾಥಪುರ, ಬಿ.ಎಂ.ಶ್ರೀನಗರ, ನಜರ್‌ಬಾದ್, ನಿಮಿಷಾಂಬ ಲೇಔಟ್, ಗಂಗೋತ್ರಿ, ಮಹದೇಶ್ವರ, ಬೃಂದಾವನ ಬಡಾವಣೆ, ತಿಲಕ್ ನಗರ, ಕುಂಬಾರಕೊಪ್ಪಲು, ವಿಜಯಶ್ರೀಪುರ, ಹೆಬ್ಬಾಳ, ಕೆ.ಜಿ.ಕೊಪ್ಪಲು, ಅಭಿಷೇಕ್ ಸರ್ಕಲ್, ಮೇಟಗಳ್ಳಿ, ಮಂಜುನಾಥಪುರ, ಸರಸ್ವತಿಪುರಂ, ಶಿವರಾಂಪೇಟೆ, ಕೆ.ಆರ್.ಮೊಹಲ್ಲಾದ ನಿವಾಸಿಗಳು ಕರೆಮಾಡಿ ಅಹವಾಲು ಸಲ್ಲಿಸಿದರು.
ಸಂಬಂಧಿಸಿದ ಆಯಾ ಇಲಾಖಾ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ಶಾಸಕರು ಭರವಸೆ ನೀಡಿದರು.