ಯಳಂದೂರು: ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಣೆ ಮಾಡುತ್ತಿದ್ದವರನ್ನು ಸೋಮವಾರ ರಾತ್ರಿ ಬೆನ್ನಟ್ಟಿದ ಪೊಲೀಸರನ್ನು ಕಂಡ ಚಾಲಕ ವಾಹನವನ್ನು ನಿಲ್ಲಿಸಿ ಪರಾರಿಯಾಗಿದ್ದಾನೆ.
ಪಟ್ಟಣದ ಕೆ.ಕೆ. ರಸ್ತೆಯಲ್ಲಿ ಸುವರ್ಣ ತಿರುಮಲ ದೇಗುಲಕ್ಕೆ ತೆರಳುವ ರಸ್ತೆಯ ಬಳಿ ಟಾಟಾ ಏಸ್ ವಾಹನದಲ್ಲಿ ಸೋಮವಾರ ರಾತ್ರಿ ಅಕ್ಕಿ ಸಾಗಣೆ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಆಧರಿಸಿ ಪ್ರತಿ ವಾಹನವನ್ನೂ ತಪಾಸಣೆ ಮಾಡುತ್ತಿದ್ದ ವೇಳೆ ಕೊಳ್ಳೇಗಾಲದಿಂದ ಯಳಂದೂರಿಗೆ ಬರುತ್ತಿದ್ದ ಟಾಟಾ ಏಸ್ ವಾಹನವನ್ನು ತಪಾಸಣೆ ಮಾಡಲು ತಡೆದ ವೇಳೆ ವಾಹನ ನಿಲ್ಲಿಸಿದ ಚಾಲಕ, ವಾಹನ ಬಿಟ್ಟು ಪರಾರಿಯಾಗಿದ್ದಾನೆ.
ಈತನನ್ನು ಕೊಳ್ಳೇಗಾಲದ ಫರಾಜ್ ಎಂದು ಗುರುತಿಸಲಾಗಿದೆ. ಈ ವಾಹನದಲ್ಲಿ 80 ಪ್ಲಾಸ್ಟಿಕ್ ಚೀಲದಲ್ಲಿ 3,845 ಕಿಲೋ ಅನ್ನಭಾಗ್ಯದ ಪಡಿತರ ಅಕ್ಕಿಯನ್ನು ತುಂಬಲಾಗಿತ್ತು. 57,675 ರೂ. ಮೌಲ್ಯದ ಅಕ್ಕಿಯನ್ನು ಪೊಲೀಸರು ವಶಪಡಿಸಿಕೊಂಡು ದೂರು ದಾಖಲಿಸಿ, ತಪ್ಪಿಸಿಕೊಂಡಿರುವ ಚಾಲಕ ಫರಾಜ್‌ನ ಬಂಧನಕ್ಕೆ ಬಲೆ ಬೀಸಿದ್ದಾರೆ.
ಕಾರ್ಯಾಚರಣೆಯಲ್ಲಿ ಸಿಪಿಐ ಕೆ.ಶ್ರೀಕಾಂತ್, ಪಿಎಸ್‌ಐ ತಾಜುದ್ದೀನ್, ಪೇದೆಗಳಾದ ಸುಕ್ರನಾಯಕ, ನಾಗೇಂದ್ರ, ಶಿವಕುಮಾರ್, ಈರಪ್ಪ, ಆಹಾರ ನಿರೀಕ್ಷಕ ಬಿಸಲಯ್ಯ ಇದ್ದರು.