ಜಿಲ್ಲೆ

ಗೋವಾದಲ್ಲಿ ವಾಣಿಜ್ಯ ವಾಹನಗಳ ಸಂಚಾರ‌ ನಿಷೇಧ; 2 ದಿನದಿಂದ ರಸ್ತೆ ಮೇಲೆ ನಿಂತ ನೂರಾರು ಲಾರಿಗಳು

ಬೆಳಗಾವಿ: ನೆರೆಯ ಗೋವಾ ರಾಜ್ಯದಲ್ಲಿ ವಾಣಿಜ್ಯ ವಾಹನಗಳ ಸಂಚಾರ್ ಬಂದ್ ಹಿನ್ನೆಲೆ ಬೆಳಗಾವಿ-ಚೋರ್ಲಾ ರಾಜ್ಯ ಹೆದ್ದಾರಿ ಮೇಲೆ 200ಕ್ಕೂ ಅಧಿಕ ಲಾರಿಗಳು ಎರಡು ದಿನಗಳಿಂದ ನಿಂತಿದ್ದು, ವಾಹನ ಸಂಚಾರ ಬಂದ್ ಆಗಿದೆ.

ಗೋವಾದಲ್ಲಿ ವಾಹನ ಸಂಚಾರ ದಟ್ಟಣೆ, ರಸ್ತೆ ಹಾಳು ಸೇರಿದಂತೆ ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು ವಾಣಿಜ್ಯ ವಾಹನಗಳ ಸಂಚಾರವನ್ನು ಗೋವಾ ಉತ್ತರ ಭಾಗದ ಜಿಲ್ಲಾಧಿಕಾರಿ ಬಂದ್ ಮಾಡಿ ಆದೇಶ ಹೊರಡಿಸಿದ್ದಾರೆ.

ಗೋವಾಕ್ಕೆ ಹೋಗಲು ಪರ್ಯಾಯ ಮಾರ್ಗಗಳು ಇಲ್ಲದಿರುವ ಕಾರಣ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶ, ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳ ವಾಣಿಜ್ಯ ಲಾರಿಗಳು ಎರಡು ದಿನಗಳಿಂದ ಗೋವಾ ಪ್ರವೇಶದ ಗಡಿಯಲ್ಲಿಯೇ ನಿಂತುಕೊಂಡಿವೆ. ಈಗಾಗಲೇ ಸಿಮೆಂಟ್, ಕಬ್ಬಿಣ, ಬಟ್ಟೆ, ಇತರೆ ಗೂಡ್ಸ್ ವಾಹನಗಳು ನಿಂತಿವೆ.‌ ಇದರಿಂದಾಗಿ ಸಂಚಾರ ದಟ್ಟಣೆ ಉಂಟಾಗಿದೆ.

ಬೆಳಗಾವಿ-ರಾಮನಗರ- ಮೌಲಂ-ಗೋವಾ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ 3 ವರ್ಷಗಳಿಂದ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಗೋವಾಗೆ ಹೋಗಲು ಬೆಳಗಾವಿ- ಚೋರ್ಲಾ ಹೆದ್ದಾರಿಯನ್ನು ಅವಲಂಬಿಸಿದ್ದಾರೆ.‌ ಇದೀಗ ಈ ಮಾರ್ಗವನ್ನು ಗೋವಾ ಬಂದ್ ಮಾಡಿದೆ. ಕೂಡಲೇ ವಾಹನ ಸಂಚಾರಕ್ಕೆ ಅವಕಾಶ ನೀಡುವಂತೆ ವಾಹನಗಳ ಮಾಲೀಕರಾದ ನಂದಕುಮಾರ ಲಮಾಣಿ, ಮಹಾದೇವಪ್ಪ ಸೋಮನಟ್ಟಿ ಮನವಿ ಮಾಡಿದ್ದಾರೆ.