ನಾಗಮಂಗಲ: ನಾನು ಸಚಿವನಾಗಿ ತಾಲೂಕಿನ ಅಭಿವೃದ್ಧಿಗಾಗಿ ಹತ್ತು ಹಲವು ಯೋಜನೆಗಳನ್ನು ತಂದು ಕೆಲಸ ಮಾಡಿರುವುದಕ್ಕಿಂತ ಬೇರೆಯವರು ಸುಳ್ಳು ಹೇಳುವುದಕ್ಕೆ ಮನ್ನಣೆ ನೀಡಿ ಮತ ಹಾಕುತ್ತೀರಿ. ಇದನ್ನು ನನ್ನ ವಿಪರ್ಯಾಸ ಅಂತ ಹೇಳಿಕೊಳ್ಳಬೇಕು ಅಷ್ಟೇ ಎಂದು ಸಚಿವ ಎನ್.ಚಲುವರಾಯಸ್ವಾಮಿ ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಹೊಣಕೆರೆ ಹೋಬಳಿಯ ಬೋಗಾದಿಯಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವಸತಿನಿಲಯವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿ, ತಾಲೂಕಿನ ಜನತೆ ಬಹಳ ಅಚ್ಚುಕಟ್ಟಾಗಿ ಸುಳ್ಳು ಹೇಳಿದ್ರೆ ಮತ್ತು ಕೆಲಸ ಮಾಡದಿರುವವರನ್ನು ಚೆನ್ನಾಗಿ ನಂಬುತ್ತೀರಿ. ತಾಲೂಕಿನ ಅಭಿವೃದ್ಧಿ ಮಾಡುವ, ಕೆಲಸ ಮಾಡುವ ಜನರನ್ನ ನಂಬಲ್ಲ ಎಂಬುದಕ್ಕೆ ಕಳೆದ 40 ವರ್ಷಗಳ ರಾಜಕೀಯದ ಅನುಭವದಲ್ಲಿ ನಾನು ಕಲಿತಿದ್ದೇನೆ. ಬೋಗಾದಿ ಗಡಿಭಾಗ ಎಂದು ಎಲ್ಲ ರೀತಿಯಲ್ಲಿಯೂ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಈ ಭಾಗಕ್ಕೆ ಹೋಗಿದ್ದ ಕಾಲೇಜನ್ನು ಮತ್ತೆ ಪುನರಾರಂಭಿಸಿದ್ದೇನೆ. ಆಸ್ಪತ್ರೆ, ಕೆಇಬಿ ಕಚೇರಿ ಮಾಡಿದ್ದೇನೆ. ಆರ್‌ಟಿಒ ಕಚೇರಿಗೆ ಮಂಡ್ಯಕ್ಕೆ ಅಲೆಯುವುದು ಬೇಡವೆಂದು ತಾಲೂಕಿನಲ್ಲಿ ಆರ್‌ಟಿಒ ಕಚೇರಿ ತಂದಿದ್ದೇನೆ. ಇಷ್ಟೆಲ್ಲ ಮಾಡಿದರೂ ನಿಮಗೆ ನಾನು ಕೆಲಸ ಮಾಡಿದ್ದೇನೆ ಎಂದು ಅಂದುಕೊಳ್ಳುತ್ತಿಲ್ಲ. ಆರ್‌ಟಿಒ ಕಚೇರಿಯನ್ನು ನಾಗಮಂಗಲದಲ್ಲಿ ಮಾಡಿಕೊಟ್ಟು ನಿಮಗೆ ಅನುಕೂಲ ಮಾಡಿಕೊಟ್ಟಿದ್ದೇನೆ. ಆದರೆ ಅದನ್ನು ಮಾಡಿಕೊಟ್ಟವರಿಗೆ ಕೃತಜ್ಞತೆ ಸಲ್ಲಿಸುವ ಕನಿಷ್ಠ ಸೌಜನ್ಯ ನಿಮ್ಮಲ್ಲಿ ಇಲ್ಲವಾಗಿದೆ. ಯಾವ ಊರಿಗೆ ಹೋದರು ರಸ್ತೆ ಆಗಬೇಕು ಅಂದು ಗೋಳಾಡುತ್ತಾರೆ. ಕರ್ನಾಟಕದ ಒಂದು ವರ್ಷದ ಬಜೆಟ್ ತಂದರೂ ತಾಲೂಕಿನ ಎಲ್ಲ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಆಗಲ್ಲ ಅನಿಸುತ್ತದೆ. ಕಳೆದ 5 ವರ್ಷ ಏನು ಮಾಡಿದ್ದಾರೋ ನನಗೆ ಗೊತ್ತಿಲ್ಲ ಎಂದರು.
ರಾಜಕೀಯವಾಗಿ ಹತ್ತಿಕ್ಕುವ ಕೆಲಸ: ರಾಜ್ಯದ ಜನರಿಗೆ ಉಚಿತ ಗ್ಯಾರಂಟಿ ಯೋಜನೆಗಳನ್ನು ನೀಡಿರುವುದು ನಿಮಗೆ ಕಾಣುತ್ತಿಲ್ಲವೇ? ಈಗ ಬಿಜೆಪಿ ಮತ್ತು ಜೆಡಿಎಸ್ ಒಂದಾಗಿವೆ. ಒಂದು ಕಡೆ ಮೋದಿ, ಮತ್ತೊಂದು ಕಡೆ ಕುಮಾರಸ್ವಾಮಿ ಅಂತಿದ್ದೀರಿ. ನಿಮ್ಮ ಪಾದ ಮುಟ್ಟಿ ಕೆಲಸ ಮಾಡುತ್ತಿರುವ ಸಿದ್ದರಾಮಯ್ಯ, ಡಿಕೆಶಿ, ಚಲುವರಾಯಸ್ವಾಮಿ ನಿಮಗೆ ಬೇಡವಾಗಿದ್ದಾರೆ. ಸಿದ್ದರಾಮಯ್ಯ ಅವರಿಗೂ ಮುಡಾ ಪ್ರಕರಣಕ್ಕೂ ಸಂಬಂಧವಿಲ್ಲ. ಆದರೂ ರಾಜಕೀಯ ದುರುದ್ದೇಶದಿಂದ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ರಾಹುಲ್ ಗಾಂಧಿಗೆ ಪ್ರಧಾನಿ ಆಗಬೇಕೆಂಬ ಹುಚ್ಚಿಲ್ಲ. ದೇಶದ ಒಗ್ಗಟ್ಟಿಗಾಗಿ ಹಾಗೂ ಪ್ರಗತಿಗಾಗಿ ಭಾರತ್ ಜೋಡೋ ಯಾತ್ರೆ ಮಾಡಿದ್ದಾರೆ. 5 ಗ್ಯಾರಂಟಿಗಳನ್ನು ರಾಜ್ಯದಲ್ಲಿ ನೀಡಿರುವುದಕ್ಕೆ ಅವರು ಕೂಡ ಸ್ಫೂರ್ತಿಯಾಗಿದ್ದಾರೆ. ಯುವ ಪೀಳಿಗೆ ಯೋಚಿಸಿ ಮತ ಚಲಾಯಿಸದೆ ಆಮೇಲೆ ಪಶ್ಚಾತ್ತಾಪಪಟ್ಟರೆ ಪ್ರಯೋಜನವಿಲ್ಲ. ನನಗೆ ಮತ ಹಾಕಿಲ್ಲ ಅಂದ್ರೆ ನನಗೆ ಖಂಡಿತಾ ಏನು ನಷ್ಟವಿಲ್ಲ. ಆದರೆ ತಾಲೂಕಿಗೆ ಅಭಿವೃದ್ಧಿ ವಿಚಾರದಲ್ಲಿ ನಷ್ಟವಾಗಲಿದೆ ಎಂದರು.
ಮನ್‌ಮುಲ್ ನಿರ್ದೇಶಕ ಲಕ್ಷ್ಮೀನಾರಾಯಣಗೌಡ, ಬೋಗಾದಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಲತಾ ಕುಮಾರ್, ಮುಖಂಡರಾದ ಎನ್.ಜೆ.ರಾಜೇಶ್, ಬಿ.ಎಲ್.ದೇವರಾಜು, ಕೊಣನೂರು ಹನುಮಂತು, ಆರ್.ಕೃಷ್ಣೇಗೌಡ, ಉಪವಿಭಾಗಾಧಿಕಾರಿ ನಂದೀಶ್ ಸೇರಿದಂತೆ ಮತ್ತಿತರರಿದ್ದರು.
========