ವಿಜಯವಾಣಿ ಸುದ್ದಿಜಾಲ ಧಾರವಾಡ
ಮಹಿಳೆ ಪ್ರತಿ ಕ್ಷೇತ್ರದಲ್ಲೂ ತನ್ನನ್ನು ಗುರುತಿಸಿಕೊಂಡಿದ್ದಾಳೆ. ಸಮಾಜದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ತೊಡಗಿದ್ದಾಳೆ. ಸಮಾಜದಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ದೊರೆಯಬೇಕು. ಮಹಿಳೆ ಮತ್ತು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಹೆಚ್ಚಿನ ಕಾನೂನುಗಳು ಜಾರಿಯಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಜಿ. ರಮಾ ಹೇಳಿದರು.
ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಜಿಲ್ಲಾ ನ್ಯಾಯಾಂಗ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆ ಮತ್ತು ಮಕ್ಕಳ ರಕ್ಷಣೆಗೆ ಸಾಕಷ್ಟು ಕಾನೂನುಗಳು ರಚನೆ ಆಗಿದ್ದರೂ ಸರಿಯಾಗಿ ಅನುಷ್ಠಾನವಾಗುತ್ತಿಲ್ಲ. ಮಹಿಳೆ, ಮಕ್ಕಳ ಮೇಲೆ ಅಪರಾಧಗಳು ಹೆಚ್ಚುತ್ತಿವೆ. ಸ್ತ್ರೀಯನ್ನು ಪೂಜಿಸುವ ನೆಲದಲ್ಲಿ ಅವಮಾನ ಆಗದಂತೆ ಎಚ್ಚರಿಕೆ ವಹಿಸಬೇಕು. ಭಾರತದ ಸಂವಿಧಾನ ಮಹಿಳೆಯರಿಗೆ ಸಾಕಷ್ಟು ಅವಕಾಶಗಳನ್ನು ನೀಡಿದೆ. ಅನೇಕ ಕ್ಷೇತ್ರಗಳಲ್ಲಿ ಮಹಿಳೆಯರು ಇತರರಿಗೆ ಮಾದರಿಯಾಗುವಂತೆ ಕೆಲಸ ಮಾಡುತ್ತಿದ್ದಾಳೆ. ಇನ್ನೂ ಹೆಚ್ಚಿನ ಅವಕಾಶ, ಉದ್ಯೋಗಗಳ ಅಗತ್ಯವಿದೆ ಎಂದರು.
ನ್ಯಾಯಾಧೀಶೆ ಪೂರ್ಣಿಮಾ ಭಂಡಾರಕರ, ಹೇಮಶ್ರೀ ಡಿ., ವಿಜಯಲಕ್ಷ್ಮೀ ಘನಾಪುರ, ನಾಗರಾಜಪ್ಪ ಎ.ಕೆ., ರಾಜಕುಮಾರ ಸಿ., ವಕೀಲರ ಸಂಘದ ಅಧ್ಯಕ್ಷ ಅಶೋಕ ಏಣಗಿ, ಮಹಿಳಾ ವಕೀಲರ ಸಂಘದ ಅಧ್ಯಕ್ಷೆ ದೀಪಾ ದಂಡವತಿ, ನ್ಯಾಯಾಧೀಶರು, ನ್ಯಾಯವಾದಿಗಳು, ಸಿಬ್ಬಂದಿ, ಇತರರು ಇದ್ದರು.
ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ದೊಡ್ಡಮನಿ ಸ್ವಾಗತಿಸಿದರು. ಸೋಮಶೇಖರ ಜಾಡರ ವಂದಿಸಿದರು.