ಮೈಸೂರು: ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ 38 ಕೋಟಿ ರೂ. ಅನುದಾನ ನೀಡಲಾಗಿದ್ದು, ಈ ಮೊತ್ತವನ್ನು ಈ ಬಾರಿ ಹೆಚ್ಚು ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
ಒಡಲು ಟ್ರಸ್ಟ್ ವತಿಯಿಂದ ನಗರದ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಭಾನುವಾರ ಕುಪ್ಪೆ ನಾಗರಾಜ ರಚನೆಯ ‘ಅಲೆಮಾರಿಯ ಅಂತರಂಗ’ ಕನ್ನಡ ಕೃತಿಯ ಇಂಗ್ಲಿಷ್ ಅನುವಾದ ‘ಏಕತಾರಿ’ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಭಿವೃದ್ಧಿ ನಿಗಮದ ಮೂಲಕ ಅಲೆಮಾರಿಗಳ ಅಭಿವೃದ್ಧಿಗೆ ಸರ್ಕಾರ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಸಮುದಾಯದ ಬೇಡಿಕೆಯನ್ನು ಗಣನೆಗೆ ತೆಗೆದುಕೊಂಡು ಮತ್ತಷ್ಟು ಯೋಜನೆ ಹಾಗೂ ಅನುದಾನ ನೀಡಲಾಗುವುದು ಎಂದು ಹೇಳಿದರು.
ಅಲೆಮಾರಿ ಸಮುದಾಯದ ವಿವಿಧ ಪಂಗಡಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದಲ್ಲಿ ಇದ್ದಾರೆ. ಈ ಎಲ್ಲ ಪಂಗಡಗಳನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೆಲವೊಂದು ಮಾನದಂಡಗಳನ್ನು ಪರಿಗಣಿಸಲಾಗುತ್ತದೆ. ಅದರಲ್ಲಿ ಪ್ರಮುಖವಾದದ್ದು ಅಸ್ಪಶ್ಯತೆ. ಅಸ್ಪಶ್ಯತೆಯ ಸಮಸ್ಯೆ ಎದುರಿಸುತ್ತಿರುವ ಸಮುದಾಯಗಳನ್ನು ಮಾತ್ರ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲಾಗುತ್ತದೆ. ಹೀಗಾಗಿ ಅಲೆಮಾರಿ ಸಮುದಾಯದ ಎಲ್ಲ ಪಂಗಡಗಳನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಈ ಅಂಶಗಳನ್ನು ಪರಿಗಣಿಸಬೇಕಾಗುತ್ತದೆ ಎಂದರು.
ಅಲೆಮಾರಿ ಸಮುದಾಯದ ಪ್ರತಿಭಾವಂತರನ್ನು ಸರ್ಕಾರ ಗುರುತಿಸುವ ಕಾರ್ಯ ಮಾಡುತ್ತದೆ. ಪ್ರತಿಭಾವಂತರು ಇದ್ದರೆ ಖಂಡಿತ ಅವರಿಗೆ ಅವಕಾಶ ದೊರೆಯಬೇಕು. ಅಲೆಮಾರಿ ಸಮುದಾಯದಲ್ಲಿ ಅತ್ಯುತ್ತಮ ಕಲಾವಿದರು ಇದ್ದರೆ ಮುಖ್ಯಮಂತ್ರಿ ಅವರ ಗಮನ ಸೆಳೆದು ಅವರನ್ನು ಗುರುತಿಸುವ ಕಾರ್ಯ ಮಾಡಲಾಗುವುದು ಎಂದು ಭರವಸೆ ನೀಡಿದರು.
ಆದಿವಾಸಿಗಳು ದೇಶದ ಮೂಲ ನಿವಾಸಿಗಳು. ಭಾರತ ದೇಶ ಆದಿವಾಸಿಗಳಿಗೆ ಸೇರಿದ್ದು. ಆದರೆ, ಹೊರಗಿನಿಂದ ಬಂದವರು ನಮ್ಮದು ಅನ್ನುತ್ತಾ ಆದಿವಾಸಿಗಳನ್ನು ಬದಿಗೆ ಸರಿಸುತ್ತಿದ್ದಾರೆ. ಈ ವಿಚಾರದಲ್ಲಿ ಆದಾವಾಸಿಗಳು ಇತ್ತೀಚೆಗೆ ಜಾಗೃತರಾಗುತ್ತಿದ್ದಾರೆ. ಆದಿವಾಸಿಗಳು ಹಾಗೂ ಅಲೆಮಾರಿಗಳು ಪ್ರಕೃತಿಯ ಆರಾಧಕರು. ಪ್ರಜಾಪ್ರಭುತ್ವದ ಬೇರು ಇರುವುದೇ ಮೂಲ ನಿವಾಸಿಗಳ ಬದುಕಿನಲ್ಲಿ ಎಂದು ಅಭಿಪ್ರಾಯಪಟ್ಟರು.
ದೊಂಬಿದಾಸರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಮಾತನಾಡಿ, ಅಲೆಮಾರಿ ಸಮುದಾಯದಲ್ಲಿ ಹಲವಾರು ಪ್ರತಿಭಾವಂತರು ಇದ್ದು, ಅವರನ್ನು ಗುರುತಿಸುವ ಕಾರ್ಯವನ್ನು ಸರ್ಕಾರ ಮಾಡಿಲ್ಲ. ನಮ್ಮ ಸಮುದಾಯದ ಅತ್ಯುತ್ತಮ ಕಲಾವಿದರಿಗೆ ಇದುವರೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅಲೆಮಾರಿ ಸಮುದಾಯ ಒಬಿಸಿ ಪಟ್ಟಿಯಲ್ಲಿ ಇದ್ದು, ನಮ್ಮನ್ನು ಎಸ್ಸಿ ಪಟ್ಟಿಗೆ ಸೇರಿಸಬೇಕು. ನಮ್ಮ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ನಡೆದಿದ್ದು, ಆ ವರದಿ ವೈಜ್ಞಾನಿಕವಾಗಿ ನಡೆದಿಲ್ಲವಾದ್ದರಿಂದ ನಮ್ಮ ಸಮುದಾಯಕ್ಕೆ ಎಲ್ಲ ಹಂತಗಳಲ್ಲೂ ಅನ್ಯಾಯವಾಗುತ್ತಿದೆ. ಕುಲಶಾಸ್ತ್ರೀಯ ಅಧ್ಯಯನ ನಡೆಸಿದವರು ನಮ್ಮ ತಾಂಡಗಳಿಗೆ ಭೇಟಿ ನೀಡಲಿಲ್ಲ. ನಮ್ಮ ಆಹಾರ, ನಮ್ಮ ಸಂಸ್ಕೃತಿ, ಆರ್ಥಿಕ ಪರಿಸ್ಥಿತಿ, ಸಾಮಾಜಿಕ ಪರಿಸ್ಥಿತಿಯನ್ನು ಸರಿಯಾಗಿ ಗಮನಿಸಿಲ್ಲ. ಹಾಗಾಗಿ ಈ ವರದಿಯನ್ನು ಮರು ಪರಿಶೀಲಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಅಲೆಮಾರಿ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆಗೊಳಿಸಬೇಕು ಎಂದು ನಾನು ಆಯೋಗದ ಅಧ್ಯಕ್ಷನಾಗಿದ್ದ ಸಂದರ್ಭ ಸಮುದಾಯದ ಮುಖಂಡರು ಮನವಿ ಸಲ್ಲಿಸಿದ್ದರು. ಆದರೆ, ಹಿಂದುಳಿದ ವರ್ಗಗಳ ಆಯೋಗ ಇದನ್ನು ಮಾಡಲು ಸಾಧ್ಯವಿಲ್ಲ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಪ್ರತ್ಯೇಕ ಆಯೋಗ ಇದ್ದು, ಅವರು ಸರ್ಕಾರಕ್ಕೆ ಒಂದು ವರದಿ ಸಲ್ಲಿಸಬೇಕು. ನಂತರ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ನಂತರ ಸಂಸತ್ ಹಾಗೂ ರಾಷ್ಟ್ರಪತಿ ಅನುಮೋದನೆಯಾದರೆ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಬಹುದು ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ, ರಾಜ್ಯ ಅಲೆಮಾರಿ, ಅರೆ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟು ಒಕ್ಕೂಟ ಗೌರವಾಧ್ಯಕ್ಷ ಪ್ರೊ.ಕೆ.ಎಂ. ಮೇತ್ರಿ, ಒಡಲು ಟ್ರಸ್ಟ್ ಅಧ್ಯಕ್ಷ ಆರ್.ಎಸ್. ದೊಡ್ಡಣ್ಣ, ಲೇಖಕ ಕುಪ್ಪೆ ನಾಗರಾಜ, ಅನುವಾದಕ ಆರ್. ಸದಾನಂದ ಹಾಗೂ ಇತರರು ಇದ್ದರು.