ವೆಲ್ಲೂರು: ದೇಶವನ್ನು ಅಭಿವೃದ್ಧಿ ಹೊಂದಿರುವ ರಾಷ್ಟ್ರವನ್ನಾಗಿಸಲು ವಿಜ್ಞಾನ, ತಂತ್ರಜ್ಞಾನ, ಸಂಶೋಧನೆ ಕ್ಷೇತ್ರ ಗಮನಾರ್ಹ ಪ್ರಗತಿ ಹೊಂದಬೇಕಿದೆ. ಈ ನಿಟ್ಟಿನಲ್ಲಿ ಹೆಚ್ಚು ಅನುದಾನ ಸಿಗುವಂತಾಗಬೇಕು ಎಂದು ವಿಐಟಿ ಸಂಸ್ಥಾಪಕ ಹಾಗೂ ಕುಲಪತಿ ಡಾ.ಜಿ. ವಿಶ್ವನಾಥನ್ ಹೇಳಿದ್ದಾರೆ.
ವೆಲ್ಲೂರಿನ ಅಣ್ಣಾ ಸಭಾಂಗಣದಲ್ಲಿ ಆಯೋಜಿಸಿರುವ 3 ದಿನಗಳ ತಂತ್ರಜ್ಞಾನ ನಿರ್ವಹಣಾ ಉತ್ಸವ ಗ್ರಾವಿಟಾಸ್- 2025 ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಕಡಿಮೆ ಜನಸಂಖ್ಯೆ ಹೊಂದಿರುವ ಅಮೆರಿಕ, ವಿಶ್ವದಲ್ಲೇ ಅತಿ ಹೆಚ್ಚು ಜಿಡಿಪಿ ಹೊಂದಿದೆ. 146 ಕೋಟಿ ಜನಸಂಖ್ಯೆ ಹೊಂದಿರುವ ಭಾರತ, ಆರ್ಥಿಕತೆಯಲ್ಲಿ ಮೊದಲ ಸ್ಥಾನ ಹೊಂದಲು ಪರಿಣಾಮಕಾರಿ ಕ್ರಮ ತೆಗೆದುಕೊಳ್ಳಬೇಕಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ತಮ್ಮ ಜಿಡಿಪಿಯ ಶೇ.3 ಅನುದಾನವನ್ನು ಸಂಶೋಧನೆ, ಅಭಿವೃದ್ಧಿಗೆ ಹೂಡಿಕೆ ಮಾಡಿದರೆ, ಭಾರತ ಶೇ.1ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಹಣ ಖರ್ಚು ಮಾಡುತ್ತಿದೆ. 2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಉನ್ನತ ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ ಮತ್ತು ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಸರ್ಕಾರಿ ವಿವಿಗಳು 1000-2000 ವಿದ್ಯಾರ್ಥಿಗಳನ್ನು ಮಾತ್ರ ದಾಖಲಿಸಿಕೊಳ್ಳುತ್ತಿದೆ. ಇದು ಬದಲಾಗಬೇಕಿದೆ. ಬಡ, ಮಧ್ಯಮ ವರ್ಗ ಸೇರಿ ಎಲ್ಲರಿಗೂ ಉನ್ನತ ಶಿಕ್ಷಣ ಲಭ್ಯವಾಗಬೇಕು. 1984ರಲ್ಲಿ 180 ವಿದ್ಯಾರ್ಥಿಗಳೊಂದಿಗೆ ಪ್ರಾರಂಭವಾದ ನಮ್ಮ ಸಂಸ್ಥೆ, ಇದೀಗ ಎತ್ತರಕ್ಕೆ ಬೆಳೆದಿದೆ. ವೆಲ್ಲೂರು, ಭೋಪಾಲ್, ಚೆನ್ನೈ, ಆಂಧ್ರಪ್ರದೇಶದಲ್ಲಿ 4 ಕ್ಯಾಂಪಸ್ ಇದೆ. 1 ಲಕ್ಷ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದೇವೆ. ಮೂಲಸೌಕರ್ಯ, ಪ್ರಯೋಗಾಲಯ, ವಿಶೇಷ ಕೌಶಲ ಹೊಂದಿರುವ ಪ್ರಾಧ್ಯಾಪಕರ ನೇಮಕಕ್ಕೆ ಆದ್ಯತೆ ನೀಡಿದ್ದೇವೆ. ಉನ್ನತ ಶಿಕ್ಷಣ ಪಡೆಯುವರ ಸಂಖ್ಯೆ ಕುಸಿತವಾಗುತ್ತಿದೆ. ಇದನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರ, ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಬೇಕು ಎಂದು ವಿಶ್ವನಾಥನ್ ತಿಳಿಸಿದರು.
ಅಬುಧಾಬಿ ಪುರಸಭೆ ಮತ್ತು ಆಡಳಿತ ಇಲಾಖೆ ಸಚಿವ ಮಜೀದ್ ಅಲಿ ಅಲ್ ಮನ್ಸೂರಿ, ನ್ಯೂಸ್-18 ವ್ಯವಸ್ಥಾಪಕ ಸಂಪಾದಕ ಆನಂದ್ ನರಸಿಂಹನ್ ಮತ್ತಿತರರರು ಕಾರ್ಯಕ್ರಮದಲ್ಲಿದ್ದರು.