ಯಳಂದೂರು: ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಅನುದಾನ ಬಿಡುಗಡೆಗೆ ಮುಂದಿನ ದಿನಗಳಲ್ಲಿ ಹೆಚ್ಚು ಶ್ರಮ ವಹಿಸಲಾಗುವುದು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ತಿಳಿಸಿದರು.
ತಾಲೂಕಿನ ಅಂಬಳೆ ಗ್ರಾಮ ಪಂಚಾಯಿತಿಯಲ್ಲಿ ಸೋಮವಾರ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ಅನುದಾನ ನೀಡಲು ತೊಂದರೆಯಾಗುತ್ತಿದೆ. ಈ ಸಮಸ್ಯೆ ಶೀಘ್ರದಲ್ಲೇ ಬಗೆಹರಿಯಲಿದೆ. ಚುನಾವಣಾ ಸಂದರ್ಭದಲ್ಲಿ ರಾಜ್ಯ ಸರ್ಕಾರ ನೀಡಿದ್ದ 5 ಗ್ಯಾರಂಟಿ ಯೋಜನೆಗಳಲ್ಲಿ ಈಗಾಗಲೇ 4 ಯೋಜನೆಗಳನ್ನು ಜಾರಿಗೆ ತಂದಿದ್ದು, ಬಡವರು, ಮಹಿಳೆಯರಿಗೆ ಅನುಕೂಲವಾಗಿದೆ. ನನ್ನ ಕ್ಷೇತ್ರ ವ್ಯಾಪ್ತಿಯ ಪ್ರತಿ ಪಂಚಾಯಿತಿಯಲ್ಲೂ ಜನಸಂಪರ್ಕ ಸಭೆ ನಡೆಯಲಿದೆ. ಇದರಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಖುದ್ದು ಹಾಜರಿರಬೇಕು ಎಂದು ಹೇಳಿದರು.
ಅಂಬಳೆ ಪಂಚಾಯಿತಿ ವ್ಯಾಪ್ತಿಯ ಅಂಬಳೆ, ಅಂಬಳೆ-02, ವೈ.ಕೆ.ಮೋಳೆ, ಚಂಗಚಹಳ್ಳಿ, ಹೆಗ್ಗಡೆಹುಂಡಿ ಗ್ರಾಮಗಳಲ್ಲಿ ಪ್ರಮುಖವಾಗಿ ರಸ್ತೆ, ಚರಂಡಿ, ಕಾಲುವೆ, ಕರೆ ಅಭಿವೃದ್ಧಿ, ಚಂಗಚಹಳ್ಳಿ, ಹೆಗ್ಗಡೆಹುಂಡಿ ಗ್ರಾಮಗಳ ಬಸ್ ನಿಲ್ದಾಣ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಗ್ರಾಮದಲ್ಲಿ ಹಾದು ಹೋಗಿರುವ ಪ್ರೈಮರಿ ವಿದ್ಯುತ್ ತಂತಿಯನ್ನು ಬದಲಿಸುವುದು, ಸ್ಮಶಾನ ಅಭಿವೃದ್ಧಿ, ಹೊಸ ಸ್ಮಶಾನ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ, ನರೇಗಾ ಕಾಮಗಾರಿಗಳು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಇಲ್ಲಿನ ಸಾರ್ವಜನಿಕರು, ರೈತರು ಮುಂದಿಟ್ಟಿದ್ದಾರೆ. ಹಂತ ಹಂತವಾಗಿ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಸಭೆಯಲ್ಲಿ ಭರವಸೆ ನೀಡಿದರು.
ಸಿದ್ದರಾಮಯ್ಯ-ಡಿಕೆಶಿ ಚೆನ್ನಾಗಿದ್ದಾರೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ಯಾವುದೇ ಮುನಿಸಿಲ್ಲ. ಸರ್ಕಾರವನ್ನು ಚೆನ್ನಾಗಿ ಮುನ್ನಡೆಸುತ್ತಿದ್ದಾರೆ. ಆದರೆ, ಇವರನ್ನು ಬೇರೆ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಮುಖ್ಯಮಂತ್ರಿ ವಿಚಾರದಲ್ಲಿ ಉಹಾಪೋಹಗಳನ್ನು ಸೃಷ್ಟಿಸಿ ಗೊಂದಲ ಮಾಡಲಾಗುತ್ತಿದೆ. ಸಾರ್ವಜನಿಕರು ಇದನ್ನು ಬದಿಗೊತ್ತಿ ಸರ್ಕಾರದ ಸಾಧನೆಗಳನ್ನು ಗಮನಿಸಬೇಕು ಎಂದರು.
ಗ್ರಾಪಂ ಉಪಾಧ್ಯಕ್ಷೆ ಮಹದೇವಮ್ಮ, ಸದಸ್ಯರಾದ ಸಿದ್ದನಾಯಕ, ನವೀನ್, ರಾಜಣ್ಣ, ನಂಜರಾಜು, ರೇವಣ್ಣ, ಪ್ರಕಾಶ್, ರಾಣಿ ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ವಿ. ಚಂದ್ರು, ಇಒ ಉಮೇಶ್, ಬಿಇಒ ಕೆ. ಕಾಂತರಾಜು, ಸಿಪಿಐ ಶಿವರಾಜ್ ಮುಧೋಳ್, ಎಇಇ ಸಂತೋಷ್, ಪಿಡಿಒ ಮಮತಾ, ಕಾರ್ಯದರ್ಶಿ ಪುಟ್ಟರಾಜು ಹಾಜರಿದ್ದರು.