ಜಿಲ್ಲೆ

ಈ ಬಾರಿ ಕಾಡ್ಗಿಚ್ಚು ಹೆಚ್ಚು

-ಹರಿಪ್ರಸಾದ್ ನಂದಳಿಕೆ, ಕಾರ್ಕಳ

ಬೇಸಿಗೆಯ ಬಿಸಿಗೆ ಕಾರ್ಕಳ ಹಾಗೂ ಹೆಬ್ರಿ ತಾಲೂಕಿನಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಪ್ರದೇಶದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹಗಲಿರುಳು ಹರಸಾಹಸ ಪಡುತ್ತಿದ್ದಾರೆ.

ಹೆಬ್ರಿ ಹಾಗೂ ಕಾರ್ಕಳ ತಾಲೂಕಿನಲ್ಲಿ ಕಳೆದ ಬಾರಿ ಡಿಸೆಂಬರ್ ಅಂತ್ಯದ ವರೆಗೆ ಸುಮಾರು 101 ಹೆಕ್ಟೆರ್ ಪ್ರದೇಶದಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಹೆಬ್ರಿ ತಾಲೂಕಿನ ಬಹುತೇಕ ಭಾಗದಲ್ಲಿ ಬೆಂಕಿ ಅವಘಡ ನಡೆದರೆ ಇತ್ತ ಕಾರ್ಕಳ ತಾಲೂಕಿನ ಬೆಳ್ಮಣ್ ಸುತ್ತಮುತ್ತ ಪದೇ ಪದೆ ಬೆಂಕಿ ಬೀಳುತ್ತಿದೆ. ತಾಲೂಕಿನಲ್ಲಿ ಅತಿ ಹೆಚ್ಚು ಬೆಂಕಿ ಅವಘಡ ಬೆಳ್ಮಣ್ ಭಾಗದಲ್ಲಿ ನಡೆಯುತ್ತಿದೆ. ಉಳಿದಂತೆ ತಾಲೂಕಿನ ಬಜಗೋಳಿ, ಮಿಯ್ಯರು, ನಕ್ರೆ, ಅಜೆಕಾರು, ಇನ್ನಾ, ಮುಂಡ್ಕೂರು, ಅತ್ತೂರು ಹೀಗೆ ಅನೇಕ ಪರಿಸರದಲ್ಲಿ ಬೆಂಕಿ ಅವಘಡಗಳಾಗಿವೆ. ಹೆಬ್ರಿ ಹಾಗೂ ಕಾರ್ಕಳ ತಾಲೂಕಿನಲ್ಲಿ ಈಗಾಲೇ ಸುಮಾರು 216 ಹೆಕ್ಟೆರ್ ಪ್ರದೇಶಕ್ಕೆ ಬೆಂಕಿ ಬಿದ್ದ ಘಟನೆ ನಡೆದಿದೆ.

ಅತಿ ಹೆಚ್ಚು ಘಟನೆ

ಕಳೆದ 3-4 ವರ್ಷಕ್ಕೆ ಹೋಲಿಸಿದರೆ ಈ ಭಾರಿ ಹೆಚ್ಚು ಪ್ರಕರಣ ನಡೆದಿದೆ. ಒಂದೆಡೆ ಬಿರು ಬಿಸಿಲು ಹಾಗೂ ಕೆಲವು ಭಾಗದಲ್ಲಿ ವಿದ್ಯುತ್ ಕಂಬಗಳಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಖಾಸಗಿ ಮತ್ತು ಸರ್ಕಾರಿ ಜಾಗದಲ್ಲಿ ಬೆಂಕಿ ಅವಘಡ ನಡೆದು ಗುಡ್ಡಗಾಡು ಪ್ರದೇಶದಲ್ಲಿದ್ದ ಸಾವಿರಾರು ಗಿಡ ಮರಗಳು ನಾಶವಾಗಿವೆ. ರಸ್ತೆಯ ಬದಿಯಲ್ಲಿ ಸಿಗರೇಟು ಸೇದಿ ಬಿಸಾಡುವುದರಿಂದ ಹೆಚ್ಚಾಗಿ ಬೆಂಕಿ ಕಾಣಿಸಿಕೊಂಡು ಎಕರೆಗಟ್ಟಲೆ ಪ್ರದೇಶ ಸುಟ್ಟು ಹೋಗುತ್ತಿದೆ.

ಸಣ್ಣ ಪುಟ್ಟ ಬೆಂಕಿ ಅವಘಡ ಸಂಭವಿಸಿದರೂ ನೀರಿನ ಸಮಸ್ಯೆಯಿಂದ ಸ್ಥಳೀಯರಿಗೆ ಬೆಂಕಿ ನಂದಿಸಲು ಕಷ್ಟಕರವಾಗಿದ್ದು,ಪದೇ ಪದೆ ಅಗ್ನಿಶಾಮಕ ದಳದ ಮೊರೆ ಹೋಗುವಂತಾಗಿದೆ. ನೀರಿನ ಕೊರತೆಯಿಂದ ಸಕಾಲದಲ್ಲಿ ನಂದಿಸಲಾಗದೆ ದೊಡ್ಡ ಅನಾಹುತ ಸಭವಿಸಿದೆ. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಹರಸಾಹಸಪಟ್ಟು ಬೆಂಕಿ ನಂದಿಸುವಂತಾಗುತ್ತದೆ.

ಕೆಲವು ಸಂದರ್ಭ ಅಗ್ನಿಶಾಮಕ ವಾಹನದಲ್ಲಿದ್ದ ನೀರು ಸಾಲದೆ ಮತ್ತೆ ನೀರು ತುಂಬಿಸಿ ಬೆಂಕಿ ನಂದಿಸಿದ ಘಟನೆ ನಡೆದಿದೆ. ಗ್ರಾಮೀಣ ಭಾಗದಲ್ಲಿ ನೀರಿನ ಕೊರತೆ ಹೆಚ್ಚಾಗಿದ್ದು, ಬೇಸಿಗೆಯ ಬಿಸಿಗೆ ಬೆಂಕಿ ಬೀಳುವ ಘಟನೆಯೂ ಹೆಚ್ಚಾಗಿ ನಡೆಯುತ್ತಿದೆ. ಮಳೆಗಾಲ ಇನ್ನೂ ಆರಂಭಗೊಳ್ಳದ ಹಿನ್ನೆಲೆಯಲ್ಲಿ ಅಲ್ಲಲ್ಲಿ ಬೆಂಕಿ ಅವಘಡಗಳು ಸಂಭವಿಸುತ್ತಿವೆ.

ಕಳೆದ ಬಾರಿಗಿಂತ ಈ ಬಾರಿ ದುಪ್ಪಟ್ಟು ಬೆಂಕಿ ಅವಘಡ ನಡೆದಿದೆ. ಈಗಾಗಲೇ 261 ಹೆಕ್ಟೆರ್ ಪ್ರದೇಶಕ್ಕೆ ಬೆಂಕಿ ಬಿದ್ದ ಪ್ರಕರಣ ಹಾಗೂ ಸುಮಾರು 17 ರಕ್ಷಣಾ ಕಾರ್ಯ ಹೆಬ್ರಿ ಹಾಗೂ ಕಾರ್ಕಳ ತಾಲೂಕಿನಲ್ಲಿ ನಡೆದಿದೆ. ಬೇಸಿಗೆಯ ಬಿಸಿಲು ಹೀಗೆ ಮುಂದುವರಿದರೆ ಮತ್ತಷ್ಟು ಅವಘಡಗಳು ನಡೆಯುವ ಸಾಧ್ಯತೆಯಿದೆ. -ಆಲ್ಪರ್ಟ್ ಮೊನಿಸ್, ಕಾರ್ಕಳ ಅಗ್ನಿಶಾಮಕದಳ ಠಾಣಾಧಿಕಾರಿ
ಬೆಂಕಿ ಅವಘಡಗಳು ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ನಡೆಯುತ್ತವೆ. ಪದೇ ಪದೆ ಅವಘಡಗಳು ನಡೆಯುತ್ತಿದ್ದು ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹರಸಾಹಸವನ್ನು ಪಡುವಂತಾಗಿದೆ. -ಸುರೇಶ್ ಶೆಟ್ಟಿ, ಗ್ರಾಮಸ್ಥ
ಬೆಂಕಿ ಬೀಳುವ ಪ್ರಕರಣ ಇತ್ತಿಚಿನ ದಿನಗಳಲ್ಲಿ ಹೆಚ್ಚಾಗಿದೆ. ನಂದಿಸುವ ಕಾರ್ಯಕ್ಕೆ ನೀರಿನ ಸಮಸ್ಯೆಯೂ ಕಾಡುತ್ತಿದೆ. ಈಗಾಗಲೇ 261 ಹೆಕ್ಟೆರ್ ಪ್ರದೇಶ ಸುಟ್ಟು ಹೋಗಿದೆ. ಬಿಸಿಲ ಬೇಗೆ ಹೀಗೆ ಮುಂದುವರಿದರೆ 300 ಹೆಕ್ಟೆರ್ ಪ್ರದೇಶ ಗಡಿ ದಾಟುವ ಎಲ್ಲಾ ಸಾಧ್ಯತೆಯೂ ಇದೆ.-ಮಹೇಶ್, ಗ್ರಾಮಸ್ಥ