ಅಂಕೋಲಾ: ಸರ್ಕಾರ ಹಾಗೂ ಉಸ್ತುವಾರಿ ಮಂತ್ರಿಗಳ ನಿರ್ದೇಶನದಂತೆ ಜನ ಸಾಮಾನ್ಯರ ಮನೆ ಬಾಗಿಲಿಗೆ ಸರ್ಕಾರದ ಸವಲತ್ತು ಸಿಗುವಂತಾಗಲು ನಾವೆಲ್ಲ ಅಧಿಕಾರಿಗಳು ನಿಮ್ಮ ಗ್ರಾಮಕ್ಕೆ ಬಂದಿದ್ದು, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸ್ಥಳೀಯ ಸಮಸ್ಯೆ ಪರಿಹಾರಕ್ಕೆ ಹೆಚ್ಚು ಒತ್ತು ನೀಡಲಾಗುವುದು ಎಂದು ತಹಸೀಲ್ದಾರ್ ಅಶೋಕ ಎನ್.ಭಟ್ ಹೇಳಿದರು.
ತಾಲೂಕಿನ ವಾಸರಕುದ್ರಿಗೆ ಗ್ರಾಪಂ ವ್ಯಾಪ್ತಿಯ ಶಾಲಾ ಆವರಣದಲ್ಲಿ ಕುಮಟಾ ಎಸಿ ಕಲ್ಯಾಣಿ ಕಾಂಬಳೆ ಅಧ್ಯಕ್ಷ ತೆಯಲ್ಲಿ ಬುಧವಾರ ನಡೆದ ಗ್ರಾಮ ವಾಸ್ತವ್ಯ ಮತ್ತು ಪಿಂಚಣಿ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಾಸರಕುದ್ರಿಗೆ ಗ್ರಾಪಂ ಅಧ್ಯಕ್ಷ ಪ್ರದೀಪ ಎನ್.ನಾಯಕ ಮಾತನಾಡಿ, ಗಂಗಾವಳಿ ನದಿ ಪ್ರವಾಹ ಮತ್ತಿತರ ಸಂದರ್ಭದಲ್ಲಿ ಗ್ರಾಮಸ್ಥರು ಪಡುವ ತೊಂದರೆ, ಪಟ್ಟಣ ಹಾಗೂ ಎರಡು ರಾಷ್ಟ್ರೀಯ ಹೆದ್ದಾರಿಗಳ ಅತೀ ಹತ್ತಿರದಲ್ಲಿದ್ದರೂ ನಮ್ಮ ಗ್ರಾಪಂ.ಹಲವು ಮೂಲಭೂತ ಸಮಸ್ಯೆಗಳು ಹಿನ್ನಡೆಯಾಗಿದೆ. ಈ ಸಮಸ್ಯೆಯನ್ನು ಹಿರಿಯ ಅಧಿಕಾರಿಗಳು ಬಗೆಹರಿಸುತ್ತಾರೆ ನಂಬಿಕೆ ಇದೆ ಎಂದರು.
ಕುಮಟಾ ಎಸಿ ಕಲ್ಯಾಣಿ ಕಾಂಬಳೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾರ್ವಜನಿಕರ ಸೇವೆಗೆ ನಾವು ಸದಾ ಸಿದ್ಧರಿದ್ದೇವೆ. ಸರ್ಕಾರ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಪ್ರತಿಯೊಬ್ಬರೂ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಸಿಡಿಪಿಓ ಸವಿತಾ ಶಾಸ್ತ್ರೀಮಠ, ಬಿಇಓ ಮಂಗಳಲಕ್ಷ್ಮೀ ಪಾಟೀಲ, ಗ್ರಾಮಸ್ಥ ನವೀನ ನಾಯಕ ಸಮಸ್ಯೆಗಳ ಕುರಿತು ಮಾತನಾಡಿದರು.
ಉಪತಹಸೀಲ್ದಾರ್ ಸುರೇಶ ಹರಿಕಂತ್ರ, ಮಾಸ್ತಿಕಟ್ಟಾ ಆರ್ಎಫ್ಓ ವಿ.ಪಿ. ನಾಯ್ಕ, ಟಿಎಚ್ಓ ಡಾ. ಜಗದೀಶ ನಾಯ್ಕ, ಗ್ರಾಪಂ. ಉಪಾಧ್ಯಕ್ಷೆ ನಾಗಮ್ಮ ಗೌಡ, ಸದಸ್ಯರಾದ ಸುಬ್ರಾಯ ಗೌಡ, ದಯಾನಂದ ನಾಯ್ಕ, ಬೇಬಿ ಆಗೇರ, ಅರ್ಚನಾ ನಾಯಕ ಉಪಸ್ಥಿತರಿದ್ದರು. ಪಿಡಿಓ ಸಹನಾ ನಾಯಕ ಸ್ವಾಗತಿಸಿದರು, ನಿವೃತ್ತ ಶಿಕ್ಷಕ ಗೌರೀಶ ನಾಯಕ ಶಿರಗುಂಜಿ ನಿರ್ವಹಿಸಿದರು.
ವಾಸರೆ ಗ್ರಾಪಂ.ವ್ಯಾಪ್ತಿಯಲ್ಲಿ ಹಲವು ಸಮಸ್ಯೆಗಳಿವೆ. ಗ್ರಾಮ ನಕ್ಷೆ ಸಿಗುತ್ತಿಲ್ಲ, ಪ್ರವಾಹ ಪೀಡತ ಪ್ರದೇಶ, ಗ್ರಾಮಕ್ಕೆ ಏತನೀರಾವರಿ ಸೌಲಭ್ಯ ಬೇಕಿದೆ. ಸ್ಮಶಾನಭೂಮಿ ಸರ್ಕಾರದಿಂದ ದೊರಕಬೇಕಿದೆ. 60 ವರ್ಷಗಳಿಂದ ಮೊದಲು ನೀಡಿದ ಭೂಮಿ ಮಂಜೂರಿಯಾಗದೆ ಸರ್ಕಾರದ ಯಾವುದೇ ಪ್ರಯೋಜನಗಳು ಅವರಿಗೆ ದೊರಕುತ್ತಿಲ್ಲ ಈ ಸಮಸ್ಯೆಗಳನ್ನು ಅಧಿಕಾರಿಗಳು ಬಗೆಹರಿಸಬೇಕು. ಪ್ರದೀಪ ಎನ್.ನಾಯಕ ಅಧ್ಯಕ್ಷರು, ಗ್ರಾಮ ಪಂಚಾಯತ ವಾಸರಕುದ್ರಿಗೆ