ಸರಗೂರು : ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ಅಭಿವದ್ಧಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.
ತಾಲೂಕಿನ ಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನುಗು ಜಲಾಶಯ-ಬೀರ್ವಾಳ್-ಮುಳ್ಳೂರು ಹಾಗೂ ಲಂಕೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಎಚ್.ಡಿ.ಕೋಟೆ ಮತ್ತು ಸರಗೂರು ವ್ಯಾಪ್ತಿಯಲ್ಲಿ ಮೂಲಸೌಕರ್ಯ ವಂಚಿತವಾಗಿರುವ ಗ್ರಾಮಗಳನ್ನು ಗುರುತಿಸಿ ಅಭಿವೃದ್ಧಿಪಡಿಸಲಾಗುವುದು. ಅಲ್ಲದೆ ಬಸ್ತಿಪುರ, ಹೂಟಗಳ್ಳಿ, ಬೆಳವಾಡಿ, ರಾಯನಕೆರೆ, ಉದ್ಬೂರು, ದೂರ, ಹುಲ್ಲಹಳ್ಳಿ, ಹುರ, ಮುಳ್ಳೂರು, ಬೀರ್ವಾಳ್ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.
ಬೇಸಿಗೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದ ರೀತಿಯಲ್ಲಿ ಅಧಿಕಾರಿಗಳು ಹೆಚ್ಚು ಗಮನಹರಿಸಬೇಕು. ಅದೇ ರೀತಿಯಾಗಿ ಜನರು ನೀರನ್ನು ಪೋಲು ಮಾಡದೆ ಮಿತವಾಗಿ ಬಳಕೆ ಮಾಡಬೇಕು ಎಂದು ಮನವಿ ಮಾಡಿದರು.
ಗ್ರಾಪಂ ಅಧ್ಯಕ್ಷೆ ಚಿನ್ನಮ್ಮ ರಾಮನಾಯಕ, ಗ್ರಾಪಂ ಸದಸ್ಯರಾದ ಸೋಮಶೇಖರ್,ಬೆಟ್ಟಸ್ವಾಮಿ, ಶಿವಚನ್ನ, ಪ್ರಕಾಶ್, ಜಿಪಂ ಮಾಜಿ ಸದಸ್ಯರಾದ ರವಿ, ಚಿಕ್ಕವೀರನಾಯಕ, ಭಾಗ್ಯಲಕ್ಷ್ಮೀ, ಮಂಜುನಾಥ್, ಮುಖಂಡರಾದ ಬೀರ್ವಾಳ್ ಬಸವರಾಜು, ಚಿಕ್ಕಣ್ಣ, ಶಂಭುಲಿಂಗನಾಯಕ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಹೂವಿನಕೊಳ ಸಿದ್ದರಾಜು, ಚೆಲುವರಾಜು, ಕೆಂಡಗಣ್ಣಸ್ವಾಮಿ, ಮೂರ್ತಿ, ಮನುಗನಹಳ್ಳಿ ಗುರುಸ್ವಾಮಿ, ದೇವಲಾಪುರ ಸಿದ್ದರಾಜು, ಶಿವರಾಜು, ಇದಿಯಪ್ಪ, ಚಿನ್ನಯ್ಯ, ಬಸವರಾಜು ಇತರರಿದ್ದರು.