ಕುರುಗೋಡು: ಜೆ.ಎಸ್.ಡಬ್ಲೂ ಕಾರ್ಖಾನೆ ಹೆಚ್ಚಿನ ಮೆಟ್ರಿಕ್ ಟನ್ ಸಿಮೆಂಟ್ ಉತ್ಪಾದಿಸುತ್ತಿರುವುದನ್ನು ನಿಲ್ಲಿಸಬೇಕೆಂದು ಕಾರ್ಖಾನೆಯ ಮೇಲ್ದರ್ಜೆ ವಿರೋಧಿ ಹೋರಾಟ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಗೆ ಮನವಿ ಸಲ್ಲಿಸಿದರು.
ಎ.ವೈ.ಎಸ್.ಪಿ.ಓ. ಸಂಘಟನೆ ರಾಜ್ಯಾಧ್ಯಕ್ಷ ಎಸ್.ಮಲಿಯಪ್ಪ, ಮಾತನಾಡಿ, ಕುಡತಿನಿ ಹಾಗೂ ತೋರಣಗಲ್ಲು ವ್ಯಾಪ್ತಿಯಲ್ಲಿ ಇರುವ ಕಾರ್ಖಾನೆ ವರ್ಷಕ್ಕೆ ಆರು ಮೆಟ್ರಿಕ್ ಟನ್ ನಿಂದ 12 ಮೆಟ್ರಿಕ್ ಟನ್ ಉತ್ಪಾದನೆ ಘಟಕವನ್ನು ಹೆಚ್ಚಿಸಲು ಹೊರಟಿರುವುದು ತೀವ್ರವಾಗಿ ಖಂಡಿಸುತ್ತೇವೆ.
ಸದ್ಯ ಉತ್ಪಾದನೆ ಆಗುತ್ತಿರುವ ಸಿಮೆಂಟ್‌ನಿಂದ ಜನರ ಆರೋಗ್ಯ ಮತ್ತು ಪರಿಸರದ ಮೇಲೆ ಪರಿಣಾಮಗಳು ಬಿರುತ್ತಿವೆ, ಅಲ್ಲದೇ ಕರ್ನಾಟಕದ ಎರಡನೇ ದೊಡ್ಡ ಕೆರೆ ಎನ್ನುವ ದರೋಜಿ ಕೆರೆ ಜಿಂದಾಲ್ ಕೆಮಿಕಲ್ ಮಿಶ್ರಿತದಿಂದ ತನ್ನ ಅಸ್ಥಿತೆಯನ್ನು ಕಳೆದುಕೊಂಡು, ಈ ಭಾಗದ ರೈತರ ವ್ಯವಸಾಯಕ್ಕೆ ಹಾಗೂ ಸಾರ್ವಜನಿಕರ ಜೀವನಕ್ಕೆ ಪಶು-ಪಕ್ಷಿಗಳ ಬದುಕಿಗೆ ಆಶ್ರಯವಾಗದೆ ಯಮ ಕಂಟಕವಾಗಿ ಮಾರ್ಪಟ್ಟಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕೆರೆ ಪಕ್ಕದಲ್ಲಿ 3800 ಎಕರೆ ರೈತ ಕುಟುಂಬಗಳ ಭೂಮಿ ಇದ್ದು, ಇವುಗಳಿಗೆ ಕೆರೆ ಯೋಗ್ಯವಾಗದೆ ರೈತರನ್ನು ಸಂಕಷ್ಟಕ್ಕೆ ದೂಡಿದೆ ಜಿಂದಾಲ್‌ನಿಂದ ಸರಕು ಸಾಗಾಣಿಕೆ ಸಾರಿಗೆ ಸಂಪರ್ಕಗಳು ಹೆಚ್ಚಾಗಿದ್ದು, ಇದರಿಂದ ಅಪಘಾತಗಳು ಹೆಚ್ಚಾಗಿ ಇದರ ಪರಿಣಾಮದಿಂದ ಮೃತಪಟ್ಟು ಮತ್ತು ಬದುಕುಳಿದು ಅಂಗವಿಕಲಾಗಿರುವ ಕುಟುಂಬಗಳ ಪರಿಸ್ಥಿತಿ ಗಂಭಿರವಾಗಿವೆ ಎಂದರು.
ವಿವಿಧ ಭಾಗದಲ್ಲಿ ಅನೇಕ ಸರ್ಕಾರಿ ಅನಾಧೀನ ಭೂಮಿಗಳನ್ನು ಜಿಂದಾಲ್ ಸಂಸ್ಥೆ ಕಬಳಿಕೆ ಮಾಡಿಕೊಂಡಿದೆ.ಈ ಭಾಗದಲ್ಲಿ ನಿಗದಿ ಪಡಿಸಿದ ಕೈಗಾರಿಕ ಅಭಿವೃದ್ಧಿ ಪ್ರಮಾಣ ಗರಿಷ್ಠ ಮಟಕ್ಕೆ ಮುಟ್ಟಿರುವ ಕಾರಣ ಇದರಿಂದ ಈ ಭಾಗದ ಜನರಿಗೆ ಸೋರಿಯಾಸಿಸ್, ಚರ್ಮ ರೋಗ ಕಾಯಿಲೆ, ಅಸ್ತಮಾ, ಕ್ಯಾನ್ಸರ್, ನೆಗಡಿ, ಕೆಮ್ಮು ವಿಪರೀತವಾಗಿ ಮಕ್ಕಳಿಗೆ, ವಯಸ್ಕರಿಗೆ ಮತ್ತು ವಯೋವೃದ್ಧರ ಬದುಕಿಗೆ ಕಂಟಕವಾಗಿದೆ ಆದ್ದರಿಂದ ಇದರ ಬಗ್ಗೆ ಜಿಲ್ಲಾಧಿಕಾರಿಗಳು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕ ಸಂಘಟನೆ ಜಿಲ್ಲಾಧ್ಯಕ್ಷ ಯು.ಕೋನಪ್ಪ, ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಕಸ್ತೂರಿ ಮಂಜುನಾಥ, ಜಿಲ್ಲಾ ಕಾರ್ಮಿಕ ಪರಿಷತ್ ಜಿಲ್ಲಾಧ್ಯಕ್ಷ ಎ.ಕೆ.ಈರಪ್ಪ, ಕರವೇ ನಗರ ಘಟಕದ ಉಪಾಧ್ಯಕ್ಷ ಮಲ್ಲಿಕಾರ್ಜುನ, ದಲಿತ ಮೈನಾರಿಟ ಸೇನೆ ನವಾಜ್ ಇದ್ದರು.