ಜಿಲ್ಲೆ

ಬಿಜೆಪಿಯಿಂದ ಬಹಳ ಜನ ಕಾಂಗ್ರೆಸ್​ಗೆ ಬರುತ್ತಾರೆ

Dharwada - Santosh Vaidya

ಹುಬ್ಬಳ್ಳಿ: ಬಿಜೆಪಿಯಿಂದ ಬಹಳಷ್ಟು ಮುಖಂಡರು ಕಾಂಗ್ರೆಸ್​ಗೆ ಬರುತ್ತಾರೆ. ಅವರ ಹೆಸರುಗಳನ್ನು ನಾನು ಈಗ ಬಹಿರಂಗ ಪಡಿಸುವುದಿಲ್ಲ. ನಾನಾಗಿಯೇ ಯಾರಿಗೂ ಬಿಜೆಪಿ ಬಿಟ್ಟು ಬನ್ನಿ ಎಂದು ಹೇಳಿಲ್ಲ. ಅವರೇ ನನಗೆ ಕರೆ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ್ ಹೇಳಿದರು.

ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಕ್ಕಾಗಿ ದುಡಿದವರನ್ನು ಬಿಜೆಪಿ ಹೊರಗೆ ಹಾಕುತ್ತಿದೆ. ಪಕ್ಷ ನಿಷ್ಠೆ ಬಗ್ಗೆ ಮಾತನಾಡಲು ಕೇಂದ್ರ ಸಚಿವ ಪ್ರಲ್ಹಾದ ಜೋಶಿಗೆ ಯಾವುದೇ ಅರ್ಹತೆ ಇಲ್ಲ. ರಾಜ್ಯದಲ್ಲಿ ಬಿಜೆಪಿಯ ಅಸ್ತಿತ್ವದ ಪ್ರಶ್ನೆ ಎದುರಾಗಿದೆ. ನಾಯಕನಿಲ್ಲದೆ ದಿನೇ ದಿನೆ ಬಿಜೆಪಿ ಸೊರಗುತ್ತಿದೆ ಎಂದರು.

ಗೃಹ ಸಚಿವ ಅಮಿತ ಷಾ ನನಗೆ ಕರೆ ಮಾಡಿದರು ಎಂದು ಬಿಜೆಪಿಯವರು ಸುಳ್ಳು ಸುದ್ದಿ ಹಬ್ಬಿಸಿಬಿಟ್ಟರು. ರಾಜಕೀಯ ಗಮನ ಬೇರೆಡೆ ಸೆಳೆಯಲು ಅವರು ಹೀಗೆ ಮಾಡಿದರು ಎಂದು ಆರೋಪಿಸಿದರು.

ರಾಜ್ಯ ಬಿಜೆಪಿ ಅಧ್ಯಕ್ಷರ ಅವಧಿ ಮುಗಿದರೂ ಇದುವರೆಗೂ ಬೇರೆಯವರನ್ನು ನೇಮಕ ಮಾಡಲಾಗುತ್ತಿಲ್ಲ. ಈ ರೀತಿ ಶೋಚನಿಯ ಪರಿಸ್ಥಿತಿ ಯಾವುದೇ ರಾಷ್ಟ್ರೀಯ ಪಕ್ಷಕ್ಕೆ ಬಂದಿರಲಿಲ್ಲ. ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಚೀಟಿ ಎತ್ತಿ ತಾತ್ಕಾಲಿಕವಾಗಿಯಾದರೂ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಿ ಎಂದಿದ್ದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸದೃಢವಾಗುತ್ತಿದೆ. ಪಕ್ಷದ ಸಂಘಟನೆಗೆ ನಾನು ಪ್ರಯತ್ನ ಮಾಡುತ್ತಿದ್ದೇನೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕನಿಷ್ಠ 15 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದರು.