ಮೈಸೂರು: ಬೃಹತ್ ಸಾಮೂಹಿಕ ಸಾರ್ವಜನಿಕ ಗಣೇಶ ವಿಸರ್ಜನಾ ಮೆರವಣಿಗೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸುವಂತೆ ಮಾಡಬೇಕು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.
ವಿಜಯನಗರದ ನಿವಾಸದಲ್ಲಿ ಮೈಸೂರು ಸಾರ್ವಜನಿಕ ಗಣೇಶ ವಿಸರ್ಜನಾ ಸಮಿತಿ ಕಾರ್ಯಕರ್ತರಿಂದ ಸೋಮವಾರ ವಿಸರ್ಜನಾ ಮೆರವಣಿಗೆ ಕಾರ್ಯಕ್ರಮಕ್ಕೆ ಬರುವಂತೆ ನೀಡಿದ ಆಹ್ವಾನ ಸ್ವೀಕರಿಸಿದ ಬಳಿಕ ಭಿತ್ತಿಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಬಾಲಗಂಗಾಧರ ತಿಲಕರು ಆಗಿನ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಭಾರತೀಯರನ್ನು ಸಂಘಟಿಸುವ ಉದ್ದೇಶದಿಂದ ಸಾರ್ವಜನಿಕ ಗಣೇಶೋತ್ಸವಕ್ಕೆ ಚಾಲನೆ ನೀಡಿದ್ದರು ಎಂದರು.
ಪ್ರಸ್ತುತ ಹಿಂದು ಧರ್ಮದ ಬಗ್ಗೆ ಜಾಗೃತಿ ಮೂಡಿಸಲು ಸಾರ್ವಜನಿಕ ಗಣೇಶೋತ್ಸವ ಅವಶ್ಯಕವಾಗಿದೆ. ನಮ್ಮ ಸಂಸ್ಕೃತಿ ರಕ್ಷಣೆ ಮಾಡುವುದು, ಜಾಗೃತ ಸಮಾಜ ನಿರ್ಮಾಣಕ್ಕೆ ಇಂತಹ ಉತ್ಸವಗಳು ಸಹಕಾರಿ ಎಂದು ಹೇಳಿದರು.
ಆಗಸ್ಟ್ 31ರಂದು ಮಧ್ಯಾಹ್ನ 1 ಗಂಟೆಗೆ ವೀರನಗೆರೆಯ ಶ್ರೀ ವೀರ ಗಣಪತಿ ದೇವಸ್ಥಾನದಿಂದ ಸಾಮೂಹಿಕ ಗಣೇಶ ವಿಸರ್ಜನಾ ಮೆರವಣಿಗೆಗೆ ಹೊರಡಲಿದೆ. ಈ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವ ಮೂಲಕ ಆಕರ್ಷಕಗೊಳಿಸಬೇಕು ಎಂದರು.
ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಿರಿಧರ್, ಮುಖಂಡರಾದ ಶ್ರೀನಿವಾಸ್, ಸು.ಮುರುಳಿ, ಮಂಜುನಾಥ್, ದಿನೇಶ್‌ಗೌಡ, ಬೊ.ಉಮೇಶ್, ದಿನೇಶ್, ಆರ್.ಪರಮೇಶ್‌ಗೌಡ, ಆನಂದ್ ಇತರರಿದ್ದರು.