ಜಿಲ್ಲೆ

ಮುರಾರ್ಜಿ ಶಾಲೆಯಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮ

ಸುನಿಲ್ ಪೊನ್ನೇಟಿ

ಕುಶಾಲನಗರ:

ಇಲ್ಲಿಗೆ ಸಮೀಪದ ಬಸವನಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಂಗಳವಾರ ಕುಶಾಲನಗರ ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಶಾಲೆಯ ವಿದ್ಯಾರ್ಥಿಗಳಿಗೆ ಸಾಂಕ್ರಾಮಿಕ ರೋಗ ಬಾಧೆಗಳು ಹಾಗೂ ಅವುಗಳನ್ನು ತಡೆಗಟ್ಟುವ ಕುರಿತು ಆರೋಗ್ಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ವೈದ್ಯಾಧಿಕಾರಿ ಡಾ. ಭರತ್ ವೈಯಕ್ತಿಕ ಶುಚಿತ್ವ, ಪರಿಸರ ಶುಚಿತ್ವ ಹಾಗೂ ರಕ್ತ ಹೀನತೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.

ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣ ಅಧಿಕಾರಿ ವಿಶ್ವಜ್ಞಾ, ಡೆಂಘೀ ಜ್ವರ ಹಾಗೂ ಡೆಂಘೀ ಜ್ವರದ ಲಕ್ಷಣಗಳ ಬಗ್ಗೆ, ಮುಂಜಾಗ್ರತಾ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಅತಿಸಾರ ಭೇದಿ ನಿಯಂತ್ರಣದ ಬಗ್ಗೆಯೂ ತಿಳಿಸಿದರು. ಡೆಂಘೀ, ಮಲೇರಿಯಾ ಜ್ವರ ಶೀಘ್ರವಾಗಿ ಪತ್ತೆ ಹಚ್ಚಿ ಸಂಪೂರ್ಣವಾದ ಚಿಕಿತ್ಸೆ ನೀಡುವುದರ ಮೂಲಕ ಗುಣಪಡಿಸಬಹುದು ಎಂದು ತಿಳಿಸಿದ ಅವರು, ಮಲೇರಿಯಾ ಜ್ವರದ ಲಕ್ಷಣಗಳು, ಚಿಕಿತ್ಸಾ ಕ್ರಮಗಳ, ಸೊಳ್ಳೆಗಳ ಜೀವನ ಚಕ್ರದ ಬಗ್ಗೆ ಮಾಹಿತಿ ನೀಡಿದರು.

ಸಂಚಾರಿ ಗಿರಿಜನ ಆರೋಗ್ಯ ಘಟಕದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜನಾರ್ದನ ರಾವ್ ಕದಂ ಮಾತನಾಡಿ, ಚಿಕೂನ್ ಗುನ್ಯಾ ಜ್ವರ, ರಾಷ್ಟ್ರೀಯ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮ, ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನೆ, ಬಗ್ನಾಯಿ ಹಾಗೂ ಹಾವು ಕಡಿತದ ಬಗ್ಗೆ ಮಾಹಿತಿ ನೀಡಿದರು. ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಸೌಮ್ಯ , ಆರೋಗ್ಯ ಇಲಾಖೆಯ ಹಿರಿಯ ಫಾರ್ಮಸಿ ಅಧಿಕಾರಿ ಶಹನಾಜ್ , ಈಶ್ವರಿ ವೆನಿಲ್ಲಾ, ಸಮುದಾಯ ಆರೋಗ್ಯ ಅಧಿಕಾರಿ ರಾಕೇಶ್, ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲೆ ಶ್ರೀದೇವಿ ಇದ್ದರು.