ಜಿಲ್ಲೆ

ನೈತಿಕತೆ ಮರೆಯಾಗಿ ಬೆಳೆಯುತ್ತಿದೆ ಸ್ವಾರ್ಥ

ಹುಬ್ಬಳ್ಳಿ: ನಮ್ಮಲ್ಲಿ ನೈತಿಕತೆ ಮರೆಯಾಗಿ ಸ್ವಾರ್ಥ ಬೆಳೆಯುತ್ತಿದೆ. ಇಂಥ ದಿನಗಳಲ್ಲಿ ಬಸವರಾಜ ಹೊರಟ್ಟಿ ಅಂಥವರು ಮಾದರಿಯಾಗಿ ನಿಲ್ಲಬಲ್ಲರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಬಣ್ಣಿಸಿದರು.

ಇಲ್ಲಿಯ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಶನಿವಾರ ಏರ್ಪಡಿಸಿದ್ದ ದಿ ಹುಬ್ಬಳ್ಳಿ ತಾಲೂಕು ಮಾಧ್ಯಮಿಕ ಶಾಲಾ ನೌಕರರ ಸಹಕಾರಿ ಪತ್ತಿನ ಸಂಘದ ಸುವರ್ಣ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರಿ ಸಂಘಗಳು ಹುಟ್ಟುತ್ತವೆ. ಅದೇ ರೀತಿಲ್ಲಿ ನಷ್ಟವನ್ನೂ ಅನುಭವಿಸುತ್ತಿದೆ. ಆದರೆ, ಈ ಸಂಘ ಆರಂಭವಾಗಿ ಐವತ್ತು ವರ್ಷ ಪೂರೈಸಿದೆ. ಇದಕ್ಕೆಲ್ಲ ಕಾರಣೀಕರ್ತರು ಸಭಾಪತಿ ಬಸವರಾಜ ಹೊರಟ್ಟಿ. ನಮ್ಮ ದೇಶದ ಇತಿಹಾಸದಲ್ಲಿ ಅವರು ಲಿಮಿಟೆಡ್ ಎಡಿಷನ್. ಇವರ ಮಾರ್ಗದರ್ಶನ ಮುಂಬರುವ ಯುವರಿಗೆ ಲಭಿಸಬೇಕು ಎಂದರು.

ಶೇ. 74ರಷ್ಟು ಸಾಕ್ಷರತಾ ಪ್ರಮಾಣ ಇದ್ದರೂ ನಮ್ಮಲ್ಲಿ ನೈತಿಕತೆ, ಮಾನವೀಯತೆ ಮರೆಯಾಗುತ್ತಿದೆ. ಸ್ವಾರ್ಥಿಗಳಾಗಿ ಬಿಟ್ಟಿದ್ದೇವೆ. ಕೆಟ್ಟ ವ್ಯವಸ್ಥೆ ನೋಡಿದರೂ ಯಾರೂ ಮಾತನಾಡುತ್ತಿಲ್ಲ. ಶಿಕ್ಷಕರು ಈ ಕುರಿತು ಆಲೋಚನೆ ಮಾಡಬೇಕು. ಮುಂಬರುವ ಯುವರಿಗೆ ದಿಕ್ಸೂಚಿಯಾಗಬೇಕು ಎಂದು ಸಲಹೆ ನೀಡಿದರು.

ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದಿನ ಕಾಲದ ಶಿಕ್ಷಕರು ಅನುಭವಿಸಿದ್ದ ಕಷ್ಟಗಳು ಇಂದಿನ ಶಿಕ್ಷಕರಿಗೆ ಇಲ್ಲ. ಏನಾದರೂ ಸಮಸ್ಯೆ ಆದರೆ, ಸಂಘಕ್ಕೆ ಬಂದು ಬಗೆಹರಿಸಿಕೊಳ್ಳುತ್ತೀರಿ. ದಿನಗಳೆದಂತೆ ನಿಯಮಗಳು ಬದಲಾಗುತ್ತಿವೆ. ಶಿಕ್ಷಕರು ಅನುಭವಿಸುತ್ತಿರುವ ಕಷ್ಟಗಳನ್ನು ಮನಗಂಡು ಸಹಕಾರಿ ಪತ್ತಿನ ಸಂಘವನ್ನು ಸ್ಥಾಪನೆ ಮಾಡಿದೆವು. ನಾವು ಮಾಡಿದ ಹೋರಾಟದ ಫಲದಿಂದ ಶಿಕ್ಷಕರಿಗೆ ಭದ್ರತೆ ದೊರೆತಿದೆ ಎಂದು ಸ್ಮರಿಸಿದರು.

ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಸುವರ್ಣ ಸಹಕಾರ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

ಆವಾಸ್ ನಿರ್ಮಾಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮಂಜುನಾಥ ಕುರಹಟ್ಟಿ, ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಆರ್. ಭಟ್ಟ, ಸಹಕಾರಿ ಸಂಘದ ಸಂಸ್ಥಾಪಕ ನಿರ್ದೇಶಕರಾದ ಸಿ.ಎನ್. ಅಷ್ಟಗಿಮಠ, ಎಫ್.ಬಿ. ಬೀರವಳ್ಳಿ, ಬಿ.ಜಿ. ಪಾಟೀಲ, ವಿ.ಬಿ. ಹಾಗರಿ, ಅಧ್ಯಕ್ಷ ಎಸ್.ವಿ. ಪಟ್ಟಣಶೆಟ್ಟಿ, ಉಪಾಧ್ಯಕ್ಷ ಶಾಂತಯ್ಯ ತಂಬೂರ, ಗೌರವ ಕಾರ್ಯದರ್ಶಿ ರವಿಕುಮಾರ ಸಿಸ್ನೂರ, ವಸಂತ ಹೊರಟ್ಟಿ, ಶಿವಶಂಕರ ಹಿರೇಮಠ, ಎಸ್.ಬಿ. ಕೊಡ್ಲಿ, ಉಷಾ ಹೊಸಮನಿ, ಬಿಇಒಗಳಾದ ಎಚ್.ಎಂ. ಫಡ್ನೀಸ್, ಉಮೇಶ ಬೊಮ್ಮಕ್ಕನವರ ಇತರರು ಇದ್ದರು.