ವಿಜಯಪುರದ ಬಿಎಲ್​ಡಿಇ ಸಂಸ್ಥೆಯ ಬಂಗಾರಮ್ಮ ಸಜ್ಜನ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಿಳಾ ಮಹಾವಿದ್ಯಾಲಯದಲ್ಲಿ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಡಾ. ಅನ್ನಪೂರ್ಣ ತುಪ್ಪದ, ಡಾ. ವೈ. ತಮ್ಮಣ್ಣ, ಭಕ್ತಿ ಮಹೀಂದ್ರಕರ ಮತ್ತಿತರರಿದ್ದಾರೆ. 
ಜಿಲ್ಲೆ

ನೈತಿಕ ಮೌಲ್ಯಗಳು ಬದುಕಿನ ಆಧಾರ ಸ್ತಂಭ

ಗಿರೀಶ ಸಗರ

ವಿಜಯಪುರ: ವೃತ್ತಿಪರ ಬದುಕಿನಲ್ಲಿ ನೈತಿಕ ಮೌಲ್ಯಗಳು ಆಧಾರ ಸ್ತಂಭಗಳಿದ್ದಂತೆ, ಅವುಗಳನ್ನು ನಮ್ಮ ಉದ್ಯೋಗದಲ್ಲಿ ಅಳವಡಿಸಿಕೊಂಡಾಗಲೇ ನಾವು ಯಶಸ್ವಿಯಾಗಲು ಸಾಧ್ಯ ಎಂದು ಬಿಎಲ್​ಡಿಇ ಸಂಸ್ಥೆಯ ಎ.ಎಸ್​. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ. ಅನ್ನಪೂರ್ಣ ತುಪ್ಪದ ಹೇಳಿದರು.

ನಗರದ ಬಿಎಲ್​ಡಿಇ ಸಂಸ್ಥೆಯ ಬಂಗಾರಮ್ಮ ಸಜ್ಜನ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಿಳಾ ಮಹಾವಿದ್ಯಾಲಯದಲ್ಲಿ ಎಂ.ಕಾಂ. ಮತ್ತು ಐಕ್ಯೂಎಸಿ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಒಂದು ದಿನದ ವೃತ್ತಿಪರ ನೈತಿಕತೆ ಮತ್ತು ಮಾನವೀಯ ಮೌಲ್ಯಗಳು ಎಂಬ ವಿಷಯದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವ್ಯಕ್ತಿಯ ವೈಯಕ್ತಿಕ ಮತ್ತು ವೃತ್ತಿಪರ ಜೀವನ ರೂಪಿಸುವಲ್ಲಿ ನೈತಿಕತೆ ಮತ್ತು ಮೌಲ್ಯಗಳು ಪ್ರಮುಖ ಪಾತ್ರ ವಹಿಸುತ್ತವೆ. ನೈತಿಕತೆ ಮತ್ತು ಮೌಲ್ಯಗಳು ಒಬ್ಬರ ವ್ಯಕ್ತಿತ್ವ ಮತ್ತು ಸಮಾಜದ ಬಗೆಗಿನ ಮನೋಭಾವ ಅಭಿವೃದ್ಧಿಪಡಿಸಲು ಪರಿಣಾಮಕಾರಿ ಕಾರ್ಯ ನಿರ್ವಹಿಸುತ್ತವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ವೈ. ತಮ್ಮಣ್ಣ ಮಾತನಾಡಿ, ನಮ್ಮ ವೃತ್ತಿಪರ ಜೀವನದಲ್ಲಿ ಅಳವಡಿಸಿಕೊಳ್ಳುವ ನೀತಿ& ನಿಯಮ, ಆದರ್ಶ, ಶಿಸ್ತು, ಸಂಸ್ಕಾರ, ಮಾನವೀಯ ಗುಣ, ಉತ್ತಮ ನಡವಳಿಕೆಗಳೇ ಮೌಲ್ಯಗಳಾಗಿವೆ. ಅವುಗಳನ್ನು ನಮ್ಮ ವೃತ್ತಿಪರ ಜೀವನದಲ್ಲಿ ಅಳವಡಿಸಿಕೊಂಡು ಮತ್ತೊಬ್ಬರಿಗೆ ಮಾದರಿಯಾಗಬೇಕು. ನೈತಿಕತೆ ಹೊಂದಿದ್ದರೆ ಎಲ್ಲವನ್ನೂ ಸಾಧಿಸಲು ಸಾಧ್ಯ ಎಂದು ಸಲಹೆ ನೀಡಿದರು.

ದಾನಮ್ಮ ಗಿಡವೀರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ವೇತಾ ಗುಡದಿನ್ನಿ ಪ್ರಾರ್ಥಿಸಿದರು. ಸುಮೇಧಾ ಹುಂಡೇಕರ ನಿರೂಪಿಸಿದರು. ಲಕ್ಷಿ$್ಮ ಮಸಳಿ ವಂದಿಸಿದರು.

ಐಕ್ಯೂಎಸಿ ಸಂಯೋಜಕಿ ಡಾ. ಭಕ್ತಿ ಮಹೀಂದ್ರಕರ, ನಿವೇದಿತಾ, ಸೌಮ್ಯ ಮತ್ತಿತರರಿದ್ದರು.