ವಿಜಯವಾಣಿ ಸುದ್ದಿಜಾಲ ಮಂಗಳೂರು
ಸರಿಯಾದ ಈಜು ಕಲಿಯದೆ ದಿನಂಪ್ರತಿ ಮಕ್ಕಳು, ಯುವಜನರು ಸಾವನ್ನಪ್ಪುವ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಹಿರಿಯ ಪ್ರಾಥಮಿಕ ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಈಜು ಕಲಿಯಲು ಅವಕಾಶ ಒದಗಿಸಬೇಕು ಎಂದು ಮುಳುಗು ತಜ್ಞ ಈಶ್ವರ್ ಮಲ್ಪೆ ಸಲಹೆ ನೀಡಿದರು.
ಶಾರದಾ ವಿದ್ಯಾಲಯದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಮೂಲತ್ವ ೌಂಡೇಶನ್ ಚಾರಿಟೇಬಲ್ ಟ್ರಸ್ಟ್, ಮಂಗಳೂರು ಇದರ 10ನೇ ವರ್ಷದ ಮೂಲತ್ವ ವಿಶ್ವ ಪ್ರಶಸ್ತಿ ಸ್ವೀಕರಿಸಿ ಅವರು ಮಾತಮಾಡಿದರು.
ಮಿಲಿಟರಿ ಸೇರುವುದು ತನ್ನ ಬಾಲ್ಯದ ಕನಸಾಗಿತ್ತು. ಶಾಲೆಯಲ್ಲಿ ಎನ್‌ಸಿಸಿ ಕೂಡ ಸೇರಿಕೊಂಡಿದ್ದೆ. ಆದರೆ ಮನೆಯಲ್ಲಿದ್ದ ಆಕಸ್ಮಿಕ ಮತ್ತು ಅಮ್ಮನನ್ನು ಕಾಡಿದ ಕಾಯಿಲೆಯಿಂದ ಶಿಕ್ಷಣ ಮುಂದುವರಿಸಲು ಸಾಧ್ಯವಾಗಲಿಲ್ಲ. ತನಗೆ ಗೊತ್ತಿರುವುದು ಈಜು ಮಾತ್ರ. ಆದರಿಂದಲೇ ಸಮಾಜಕ್ಕೆ ಕೈಲಾದ ಸೇವೆ ಮಾಡುತ್ತಾ ಬಂದಿದ್ದೇನೆ ಎಂದು ಅವರು ಹೇಳಿದರು.
ಇಲ್ಲಿಯ ತನಕ ನೀರಿನಲ್ಲಿ ಬಿದ್ದ ಸುಮಾರು 80 ಕ್ಕೂ ಅಧಿಕ ಜೀವಗಳನ್ನು ರಕ್ಷಿಸಿದ್ದೇನೆ. 1000 ಕ್ಕೂ ಅಧಿಕ ಮೃತದೇಹಗಳನ್ನು ನೀರಿನಿಂದ ಮೇಲೆತ್ತಿದ್ದೇನೆ. ತನ್ನ ಮೂರು ಮಕ್ಕಳಲ್ಲಿ ಓರ್ವ ಮೃತಪಟ್ಟಿದ್ದು, ಇನ್ನಿಬ್ಬರು ವಿಶೇಷ ಚೇತನ ಮಕ್ಕಳಾಗಿದ್ದಾರೆ. ಸಮಾಜದ ಜನರ ಕಷ್ಟಗಳಿಗೆ ಸ್ಪಂದಿಸುತ್ತಾ ವೈಯುಕ್ತಿಕ ಜೀವನದ ನೋವುಗಳನ್ನು ಮರೆಯಲು ಪ್ರಯತ್ನಿಸುತ್ತೇನೆ ಎಂದು ಅವರು ಹೇಳಿದರು.
ಮಂಗಳೂರು ಮೀನುಗಾರಿಕೆ ಕಾಲೇಜು ಡೀನ್ ಡಾ.ಎಚ್.ಆಂಜನೇಯಪ್ಪ ಮಾತನಾಡಿ, ವಿವಿಧ ಹಾಗೂ ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಅರ್ಹ ಜನರನ್ನು ಗುರುತಿಸಿ ಪ್ರಶಸ್ತಿಯನ್ನು ಸೂಕ್ತ ನಗದು ಬಹುಮಾನದೊಂದಿಗೆ ವಿತರಿಸುತ್ತಾ ಬಂದಿರುವ ಮೂಲತ್ವ ೌಂಡೇಶನ್ ಕಾರ್ಯ ಅಭಿನಂದನೀಯ ಎಂದರು.
ತಜ್ಞ ಈಶ್ವರ್ ಮಲ್ಪೆ ಅವರಿಗೆ ಪ್ರಶಸ್ತಿ ಲಕದ ಜತೆಗೆ ಒಂದು ಲಕ್ಷದ ಒಂದು ರೂಪಾಯಿ ನಗದು ನೀಡಿ ಗೌರವಿಸಲಾಯಿತು. ಸಾಮಾಜಿಕ ಕಾರ್ಯಕರ್ತ ರವಿ ಕಟಪಾಡಿ, ಹಿರಿಯ ಕಲಾವಿದ ವಾಲ್ಟರ್ ನಂದಳಿಕೆ, ಉಚ್ಚಿಲ ಮೊಗವೀರ ಮಹಾಸಭಾ ಉಪಾಧ್ಯಕ್ಷ ಮೋಹನ ಬೆಂಗ್ರೆ ಉಪಸ್ಥಿತರಿದ್ದರು.
ಮೂಲತ್ವ ೌಂಡೇಶನ್ ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕ ಪ್ರಕಾಶ್ ಮೂಲತ್ವ ಪ್ರಸ್ತಾವನೆಗೈದರು. ಸ್ಪರ್ಧೆಯ ಜೂರಿಯರಲ್ಲೊಬ್ಬರಾದ ಪ್ರೊ.ರಾಜಮೋಹನ್ ರಾವ್ ಪ್ರಶಸ್ತಿ ಪತ್ರ ವಾಚಿಸಿದರು.ಟ್ರಸ್ಟಿಗಳಾದ ಕಲ್ಪನಾ ಪಿ.ಕೋಟ್ಯಾನ್, ಶೈನಿಲಕ್ಷ್ಮೀಶ ಪಿ.ಕೋಟ್ಯಾನ್ ಉಪಸ್ಥಿತರಿದ್ದರು.