ಜಿಲ್ಲೆ

ಸಿದ್ಧಾಂತ ಮಂದಿರ ನವೀಕರಣ : ಒಂದು ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ವ್ಯವಸ್ಥೆ : ಭದ್ರತೆಗೆ ಒತ್ತು 4 ತಿಂಗಳಲ್ಲಿ ಲೋಕಾರ್ಪಣೆ

ಸೌಮ್ಯ ಆರ್

ಯಶೋಧರ ವಿ.ಬಂಗೇರ ಮೂಡುಬಿದಿರೆ

ಹನ್ನೆರಡು ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ಸಿದ್ಧಾಂತ ಬಿಂಬಗಳ ಕಳ್ಳತನ ಬಳಿಕ ಬಾಧಿತವಾಗಿದ್ದ ಮೂಡುಬಿದಿರೆ ಸಿದ್ಧಾಂತ ಮಂದಿರ ಬಿಂಬಗಳ ದರ್ಶನ ಭಾಗ್ಯ ಇನ್ನು ನಾಲ್ಕು ತಿಂಗಳಲ್ಲಿ ಯಾತ್ರಿಕಗಳಿಗೆ ಸಿಗಲಿದೆ.

ಕೋಟ್ಯಂತರ ರೂ. ಬೆಲೆಬಾಳುವ ಅಪೂರ್ವ ಸಿದ್ಧಾಂತ ಬಿಂಬಗಳ(ಮೂರ್ತಿಗಳು) ಕಳವು ಪ್ರಕರಣ ಬೆಳಕಿಗೆ ಬಂದ ಸಂದರ್ಭ, ಆ ಬಳಿಕ ಸಿಕ್ಕ ಕೆಲವು ಬಿಂಬಗಳ ದರ್ಶನವನ್ನು ಸುರಕ್ಷತೆಯ ದೃಷ್ಟಿಯಿಂದ ಸಿದ್ಧಾಂತ ಮಂದಿರದಲ್ಲಿರಿಸುವುದನ್ನು, ಅದರ ವೀಕ್ಷಣೆಯನ್ನು ನಿರ್ಬಂಧಿಸಲಾಗಿತ್ತು. ಇದರಿಂದಾಗಿ ಕಳೆದ 12 ವರ್ಷಗಳಿಂದ ಸಿದ್ಧಾಂತ ಬಿಂಬಗಳ ಸೂಕ್ತ ದರ್ಶನ ಯಾತ್ರಿಗಳಿಗೆ ಇಲ್ಲದಂತಾಗಿತ್ತು.

1 ಕೋಟಿ ರೂ.ನಲ್ಲಿ ನವೀಕರಣ: ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ಸಿದ್ಧಾಂತ ಮಂದಿರ ಕಟ್ಟಡ ನಿರ್ಮಾಣ ಸಮಿತಿ ಮಂದಿರ ಭದ್ರತೆಗೆ ಹೆಚ್ಚಿನ ಒತ್ತು ನೀಡಿದೆ. ಹಿಂದೆ ಇದ್ದ ಸಿದ್ಧಾಂತ ಮಂದಿರವನ್ನು ನವೀಕರಿಸಲಾಗಿದ್ದು, ಸುಮಾರು 1 ಕೋಟಿ ರೂ. ವ್ಯಯಿಸಲಾಗುತ್ತಿದೆ. ಉಕ್ಕು ಮಿಶ್ರಿತ ಗಟ್ಟಿ ಗೋಡೆಗಳನ್ನು ಮಂದಿರದ ಪುನಃನಿರ್ಮಾಣದಲ್ಲಿ ಬಳಸಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಭದ್ರತೆಯ ದೃಷ್ಟಿಯಿಂದ ಅಳವಡಿಸಲಾಗುತ್ತಿದೆ. 50 ಲಕ್ಷ ರೂ.ಗಳನ್ನು ಕಟ್ಟಡ ನಿರ್ಮಾಣ ಬಳಕೆ ಮಾಡಲಾಗಿದ್ದು, ಉಳಿದ 50 ಲಕ್ಷ ರೂ.ಗಳನ್ನು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಭದ್ರತೆಗೆ ಮೀಸಲಿರಿಸಲಾಗಿದೆ.

ನಾಲ್ಕು ತಿಂಗಳಲ್ಲಿ ಲೋಕಾರ್ಪಣೆ

ಕಟ್ಟಡ ನವೀಕರಣದ ಶೇ.90 ಕಾಮಗಾರಿಗೆ ಮುಗಿದಿದ್ದು, ಶೀಘ್ರದಲ್ಲೇ ಅತ್ಯಾಧುನಿಕ ಭದ್ರತಾ ವ್ಯವಸ್ಥೆ ಕೆಲಸ ನಡೆಯಲಿದೆ. 24/7 ಸೆಕ್ಯುರಿಟಿ ನೇಮಿಸುವ ಇರಾದೆಯೂ ಸಮಿತಿಯ ಮುಂದಿದೆ. ಸಿದ್ಧಾಂತ ಮಂದಿರ ಕಾಮಗಾರಿ ಪ್ರಗತಿಯಲ್ಲಿದ್ದು, ನಾಲ್ಕು ತಿಂಗಳಲ್ಲಿ ಲೋಕಾರ್ಪಣೆಗೊಳ್ಳುವ ನಿರೀಕ್ಷೆ ಇದೆ.

ಬಹುಕೋಟಿ ಮೌಲ್ಯದ ಸೊತ್ತು ಕಳವು

ಬಹುಕೋಟಿ ರೂಪಾಯಿ ಮೌಲ್ಯದ ಅಪೂರ್ವ ಸಿದ್ಧಾಂತ ಬಿಂಬಗಳನ್ನು ಕಳವು ಮಾಡಿರುವ ಪ್ರಕರಣ 2013ರ ಜುಲೈ ತಿಂಗಳಲ್ಲಿ ಬೆಳಕಿಗೆ ಬಂದಿತ್ತು. ಪ್ರಕರಣದ ಪ್ರಮುಖ ಆರೋಪಿ ಸಂತೋಷ್‌ದಾಸ್ ಸಹಿತ ಆರೋಪಿಗಳನ್ನು ಆ ಬಳಿಕ ಬಂಧಿಲಾಗಿತ್ತು. ಈ ನಡುವೆ ಅಂಚೆ ಮೂಲಕ ಮೂರ್ತಿಗಳು ಪೊಲೀಸ್ ಇಲಾಖೆಗೆ ಲಭ್ಯವಾಗಿ ಮಠ ಸೇರಿವೆ. ಆರೋಪಿಗಳು ಕರಗಿಸಿದ ಸಿದ್ಧಾಂತ ಮೂರ್ತಿಗಳ ಗಟ್ಟಿ ಪುನಃ ಮಠಕ್ಕೆ ಸೇರಬೇಕಾಗಿದೆ.

ಸಿದ್ಧಾಂತ ಮಂದಿರದ ನವೀಕರಣ ಕೆಲಸ ಬಹುತೇಕ ಪೂರ್ಣಗೊಂಡಿದ್ದು, ಕೆಲವೇ ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ. ಹಿಂದೆ ಏಕ ಕಾಲದಲ್ಲಿ 50ಕ್ಕೂ ಅಧಿಕ ಮಂದಿಗೆ ಸಿದ್ಧಾಂತ ದರ್ಶನ ಅವಕಾಶ ಕಲ್ಪಿಸಲಾಗಿತ್ತು. ಭದ್ರತೆಯ ದೃಷ್ಟಿಯಿಂದ ಇನ್ನು ಮುಂದೆ 30 ಮಂದಿಗೆ ಮಾತ್ರ ಅವಕಾಶ ಕಲ್ಪಿಸುತ್ತೇವೆ. ಕಳವು ಪ್ರಕರಣದ ಬಳಿಕ ಬಸದಿಗಳ ಸುರಕ್ಷತೆಗೆ ಪೊಲೀಸ್ ಇಲಾಖೆ ಸಹಕರಿಸುತ್ತಿದೆ. ಬಹುಬೇಡಿಕೆಯ ಪೊಲೀಸ್ ಔಟ್‌ಪೋಸ್ಟ್ ವ್ಯವಸ್ಥೆಯನ್ನು ಇಲಾಖೆ ಕಲ್ಪಿಸಬೇಕಾಗಿದೆ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಜೈನಮಠ, ಮೂಡುಬಿದಿರೆ