ಮನೋಹರ್ ಬಳಂಜ ಬೆಳ್ತಂಗಡಿ
ದಶಕಗಳಿಂದ ಕೃಷಿ ಚಟುವಟಿಕೆ ಸೇರಿ ಹೈನುಗಾರಿಕೆಯನ್ನೇ ಜೀವಾಳವಾಗಿಸಿದ ನಡ ಗ್ರಾಮದ ಮೂಡಾಯಿಬೆಟ್ಟು ಬೋಜಾರ ನಿವಾಸಿಗಳಿಗೆ ರಸ್ತೆ ಹಾಗೂ ಕಿಂಡಿ ಅಣೆಕಟ್ಟು ಸಂಪರ್ಕವೇ ಮುಳುವಾಗಿದೆ.
ಗಡಾಯಿಕಲ್ಲು ತೆರಳುವ ರಸ್ತೆಯಲ್ಲಿ ಸಿಗುವ ಮಂಜೊಟ್ಟಿ ಸಮೀಪ ಸೋಮಾವತಿ ನದಿಗೆ ಅಡ್ಡಲಾಗಿ ಕಟ್ಟಿದ ಸೇತುವೆ ಕಿರಿದಾಗಿದ್ದು ಭಾರಿ ವಾಹನಗಳ ಸಾಗಾಟಕ್ಕೆ ಯೋಗ್ಯವಾಗಿಲ್ಲ. ಇದೇ ಹಾದಿಯಾಗಿ ಬಲಕ್ಕೆ ತೆರಳುವಾಗ ಮೂಡಾಯಿಬೆಟ್ಟು ಪ್ರಾಥಮಿಕ ಶಾಲೆ, ಅಂಗನವಾಡಿ, ಹಾಲಿನ ಡೇರಿಗೆ ತೆರಳುವ 1.5 ಕಿ.ಮೀ. ರಸ್ತೆ ತೀರ ಹದಗೆಟ್ಟು ಸಂಚಾರ ದುಸ್ತರವಾಗಿದೆ. ಸುತ್ತಮುತ್ತ 150ಕ್ಕೂ ಅಧಿಕ ಮನೆಗಳಿದ್ದು ಶಾಶ್ವತ ರಸ್ತೆ ಹಾಗೂ ಸೇತುವೆ ನಿರ್ಮಾಣಕ್ಕೆ 20 ವರ್ಷಗಳಿಂದ ಬೇಡಿಕೆ ನೀಡುತ್ತಾ ಬಂದಿದ್ದಾರೆ.
ಅವೈಜ್ಞಾನಿಕ ಕಿಂಡಿ ಅಣೆಕಟ್ಟು: ಇದೇ ರಸ್ತೆಯಾಗಿ ಮುಂದೆ ಸಾಗಿದರೆ ಬೋಜಾರಕ್ಕೆ ಸಂಪರ್ಕ ಕಲ್ಪಿಸುವ ಸೋಮಾವತಿ ನದಿಗೆ ಪ್ರಥಮವಾಗಿ 1980ರಲ್ಲಿ ಕಟ್ಟಿದ ಕಿಂಡಿ ಅಣೆಕಟ್ಟು ಈಗಲೋ ಆಗಲೋ ಎಂಬ ಸ್ಥಿತಿಗೆ ತಲುಪಿದೆ. ಸೋಮಾವತಿ ಆರಂಭದಲ್ಲಿ ಸಿಗುವ 4 ಅಡಿ ಅಗಲ 80 ಅಡಿ ಉದ್ದದ ಕಿಂಡಿ ಅಣೆಕಟ್ಟು 1995ರಲ್ಲಿ ಮೇಲ್ದರ್ಜೆಗೆ ಏರಿಸಲಾದರೂ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಮರಮಟ್ಟುಗಳು ಕೊಚ್ಚಿ ಬಂದು ಸಿಲುಕಿಕೊಳ್ಳುತ್ತಿದ್ದು, ಕುಸಿತ ಭೀತಿ ಎದುರಿಸುತ್ತಿದೆ. ಕಳೆದ ಮಳೆಗಾಲದಲ್ಲಿ ಒಂದು ಭಾಗದ ಸಂಪರ್ಕ ರಸ್ತೆ ಕುಸಿತದಿಂದ ಈಗ ಅಡಕೆ ಪಾಲ ಹಾಗೂ ಮರದ ಕಾಲುಸಂಕವಾಗಿ ಬಳಕೆ ಮಾಡಲಾಗುತ್ತಿದೆ.
ಕೊಚ್ಚಿ ಹೋಗುವ ಭೀತಿ: ಕಳೆದ ಮಳೆಗಾಲಕ್ಕೆ ಸೇತುವೆ ಸಮೀಪದ ರಾಮಚಂದ್ರ ಎಂಬುವರ 1 ಎಕರೆಗೂ ಅಧಿಕ ಸ್ಥಳ ಕೊಚ್ಚಿ ಹೋಗಿದ್ದು, ಸೇತುವೆ ಸಮೀಪ 20 ಅಡಿಗಳಷ್ಟು ಭೂಪ್ರದೇಶ ಕೊಚ್ಚಿಹೋಗಿ ಸಂಪರ್ಕ ರಸ್ತೆ ಇಲ್ಲದಂತಾಗಿದೆ. ಇದರಿಂದ ಮೂಡಾಯಿಬೆಟ್ಟು ಶಾಲೆಗೆ ತೆರಳುವ 25ಕ್ಕೂ ಅಧಿಕ ಮಕ್ಕಳು, ಹೈನುಗಾರರು ಅಥವಾ ಆರೋಗ್ಯ ಸಮಸ್ಯೆಯಾದಲ್ಲಿ ವಯಸ್ಸಾದವರು ಬೆಳ್ತಂಗಡಿ ತೆರಳಲು ಇದೇ ರಸ್ತೆ ಅವಲಂಬಿಸಿದ್ದಾರೆ. ಅಡಕೆ ಪಾಲದ ಸೇತುವೆ ಮುರಿದು ಬಿದ್ದಲ್ಲಿ ನೀರಲ್ಲಿ ಕೊಚ್ಚಿ ಹೋಗುವ ಆತಂಕ ನಿವಾಸಿಗಳದು.
ಸುತ್ತು ಬಳಸಿ ಪ್ರಯಾಣ
ಆಸ್ಪತ್ರೆ ಸಮಸ್ಯೆಯಾದಲ್ಲಿ ಅಥವಾ ಕೃಷಿ ಉಪಕರಣ, ವಾಹನ ಸಾಗಾಟಕ್ಕೆ ಬೋಜಾರ ನಿವಾಸಿಗಳು ಮಂಜೊಟ್ಟಿ ತಲುಪಲು 2 ಕಿ.ಮೀ. ಇದೆ. ರಸ್ತೆ ಹಾಗೂ ಸೂಕ್ತ ಸೇತುವೆ ನಿರ್ಮಾಣವಾಗದೆ ಇರುವುದರಿಂದ ಬೋಜಾರದಿಂದ ಹತ್ಯಡ್ಕ- ಕೈಕಂಬ ರಸ್ತೆಯಾಗಿ 15 ಕಿ.ಮೀ. ಸುತ್ತು ಬಳಸಿ ಮಂಜೊಟ್ಟಿಗೆ ತಲುಪಬೇಕಿದೆ.
ನೆಟ್‌ವರ್ಕ್ ಸಮಸ್ಯೆ
ಬೋಜಾರ, ಮೂಡಾಯಿಬೆಟ್ಟು ಸುತ್ತಮುತ್ತ ಪ್ರದೇಶದಲ್ಲಿ ಖಾಸಗಿ ಅಥವಾ ಬಿಎಸ್‌ಎನ್‌ಎಲ್ ಯಾವುದೇ ನೆಟ್‌ವರ್ಕ್ ಲಭ್ಯವಿಲ್ಲ. ಇಲ್ಲಿನ ಮಕ್ಕಳು ಆನ್‌ಲೈನ್ ತರಗತಿಗೆ ಹಾಜರಾಗಲು ನೆಂಟರ ಮನೆಗೆ ತೆರಳಬೇಕಾದ ಪರಿಸ್ಥಿತಿ ಬಂದೊದಗಿದೆ.
ಮೂಡಾಯಿಬೆಟ್ಟು ಶಾಶ್ವತ ರಸ್ತೆ ನಿರ್ಮಾಣದ ಜತೆಗೆ ಸೇತುವೆ ನಿರ್ಮಾಣ ಮಾಡಿದಲ್ಲಿ ಹಲವು ವರ್ಷಗಳ ಬೇಡಿಕೆ ಈಡೇರಿದಂತಾಗಲಿದೆ. ಹೈನುಗಾರರು, ಕೃಷಿಕರು, ಶಾಲಾ ಮಕ್ಕಳಿಗೆ ಸೇತುವೆ ದಾಟಲು ತೀರ ಸಮಸ್ಯೆಯಾಗಿದೆ. ಈ ನಿಟ್ಟಿನಲ್ಲಿ ಶಾಶ್ವತ ಯೋಜನೆ ಕಲ್ಪಿಸಿಕೊಡಬೇಕು ಎಂಬುದು ನಮ್ಮ ಬೇಡಿಕೆ.
ಯತೀಶ್ ಗೌಡ, ಮೂಡಾಯಿಬೆಟ್ಟು