ಜಿಲ್ಲೆ

ಮಹಾಮೂಡಪ್ಪ ಸೇವೆಗೆ ಅರಿಕೊಟ್ಟಿಗೆ ಮುಹೂರ್ತ : ಅಪ್ಪ ತಯಾರಿಗೆ ಚಾಲನೆ

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಸೀಮೆ ದೇಗುಲ ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಶತಮಾನದ ಮೊದಲ ಮೂಡಪ್ಪ ಸೇವೆಗೆ ಅರಿಕೊಟ್ಟಿಗೆ ಮುಹೂರ್ತ ಶನಿವಾರ ತಂತ್ರಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರ ನೇತೃತ್ವದಲ್ಲಿ ನೆರವೇರಿತು. ವೈದಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ದೀಪಬಲಿ, ದರ್ಶನ ಬಲಿ, ರಾಜಾಂಗಣ ಪ್ರಸಾದ, ಶತರುದ್ರಾಭಿಷೇಕ, 128 ಕಾಯಿ ಅಷ್ಟದ್ರವ್ಯ ಮಹಾಗಣಪತಿ ಯಾಗ, ಕಲಶಾಭಿಷೇಕ ನಡೆಯಿತು. ಮೂಡಪ್ಪ ಸೇವೆಗೆ ಅರಿಕೊಟ್ಟಿಗೆ ಮುಹೂರ್ತ ನಡೆಸುವುದರೊಂದಿಗೆ ಅಪ್ಪ ತಯಾರಿಗೆ ಚಾಲನೆ ನೀಡಲಾಯಿತು. ನಂತರ ಮಹಾಪೂಜೆ ನಡೆಯಿತು.

ಸಂಜೆ ಉತ್ಸವ ಬಲಿ, ಮೂಲಸ್ಥಾನ ಉಳಿಯತ್ತಡ್ಕಕ್ಕೆ ಶ್ರೀ ದೇವರ ಸವಾರಿ, ರಾತ್ರಿ 8ರಿಂದ ಶ್ರೀದೇವರ ಬೆಡಿಕಟ್ಟೆಯಲ್ಲಿ ಸುಡುಮದ್ದು ಪ್ರದರ್ಶನ, ರಾತ್ರಿ 10ರಿಂದ ಶ್ರೀಭೂತಬಲಿ, ಮಹಾಮೂಡಪ್ಪಾಧಿವಾಸ ಹೋಮ, ರಾತ್ರಿ 11ರಿಂದ ಮಹಾಗಣಪತಿ ದೇವರಿಗೆ ಮಹಾಮೂಡಪ್ಪ ಸಮರ್ಪಣೆ, ಶಯ್ಯಕಲ್ಪನೆ, ಕವಾಟ ಬಂಧನ ನಡೆಯಿತು. 50 ಸಾವಿರಕ್ಕಿಂತಲೂ ಹೆಚ್ಚಿನ ಭಕ್ತರು ಶ್ರೀದೇವರ ದರ್ಶನಕ್ಕೆ ಆಗಮಿಸಿದ್ದರು.

ಗಣ್ಯರ ಆಗಮನ: ಶನಿವಾರ ಪ್ರಮುಖರಾದ ಕೊಡುಗೈ ದಾನಿ ಹಾಗೂ ಉದ್ಯಮಿ ಕೆ.ಕೆ.ಶೆಟ್ಟಿ, ಇ.ಮಹಾಬಲೇಶ್ವರ ಭಟ್, ಕರ್ನಾಟಕ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಮೊದಲಾದವರು ದೇವಾಲಯಕ್ಕೆ ಭೇಟಿ ನೀಡಿ ಶ್ರೀದೇವರ ದರ್ಶನ ಪಡೆದರು.