ದೇವಿಪುರ ಗ್ರಾಮದಲ್ಲಿ ಶನಿವಾರ ಮಳೆಗೆ ರೈತರು ಬೆಳೆದ ಜೋಳ ಮೊಳಕೆ ಒಡೆದಿರುವುದು. 
ಜಿಲ್ಲೆ

ಮುಂಗಾರು ಪೂರ್ವ ಮಳೆ; ದೇವಿಪುರದಲ್ಲಿ ಮೊಳಕೆ ಒಡೆದ ಜೋಳ

ಶಾಮಸುಂದರ್ ಕೊಪ್ಪಳಕರ್

ಮಾನ್ವಿ: ಸರ್ಕಾರ ಜೋಳ ಖರೀದಿ ಕೇಂದ್ರ ತೆರೆದರೂ ನೋಂದಣಿ ವಿಳಂಬ ಕಾರಣಕ್ಕೆ ಹೊಲಗಳಲ್ಲಿ ಸಂಗ್ರಹಿಸಿದ್ದ ಜೋಳ ಎರಡು ದಿನ ಸುರಿದ ಮಳೆಗೆ ತೊಯ್ದು ಚೀಲಗಳಲ್ಲೇ ಮೊಳಕೆ ಒಡೆದಿದ್ದು, ರೈತರು ಚಿಂತೆಗೀಡಾಗಿದ್ದಾರೆ.

ತಾಲೂಕಿನ ದೇವಿಪುರ ಗ್ರಾಮದಲ್ಲಿ ಎರಡು ದಿನಗಳಿಂದ ಸುರಿದ ಭಾರಿ ಮಳೆಗೆ ರೈತರು ಜಮೀನುಗಳಲ್ಲಿ ಶೇಖರಿಸಿಟ್ಟಿದ್ದ ಜೋಳದ ಚೀಲಗಳು ತೊಯ್ದಿವೆ. ಇದರಿಂದ ಜೋಳದ ಕಾಳುಗಳು ಮೊಳಕೆ ಬಂದಿದ್ದು, ರೈತರಿಗೆ ದಿಕ್ಕು ತೋಚದಂತಾಗಿದೆ. ಅದರಲ್ಲೂ ರೈತ ಚೌಡಯ್ಯ ಆರು ಎಕರೆಯಲ್ಲಿ ಜೋಳ ಬೆಳೆದಿದ್ದರು. ಉತ್ತಮವಾಗಿ ಫಸಲು ಬಂದಿತ್ತು. ಎಕರೆಗೆ 35 ಕ್ವಿಂಟಾಲ್‌ನಂತೆ ಒಟ್ಟು 210 ಕ್ವಿಂಟಾಲ್ ಜೋಳ ಫಸಲು ಬಂದಿತ್ತು. ಆದರೆ, ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದ ಕಾರಣ ಜೋಳ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡುವುದಕ್ಕೆ ಜಮೀನಿನಲ್ಲಿ ಜೋಳ ಸಂಗ್ರಹಿಸಿದ್ದರು.

ಆದರೆ, ನೋಂದಣಿ ಪ್ರಕ್ರಿಯೆ ವಿಳಂಬ ಮಾಡಿದ್ದರಿಂದ ಜಮೀನಿನಲ್ಲಿ ಸಂಗ್ರಹಿಸಿದ್ದ ಜೋಳ ಶನಿವಾರ ಬಂದ ಮಳೆಗೆ ಮೊಳಕೆ ಒಡೆದಿದೆ. ಎಕರೆಗೆ 30 ಸಾವಿರ ರೂ. ಖರ್ಚು ಮಾಡಲಾಗಿದೆ. ಸರ್ಕಾರದಿಂದ ಕೂಡಲೇ ರೈತರಿಗೆ ಆಗಿರುವ ಬೆಳೆ ನಷ್ಟ ಕುರಿತು ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸಿ ಅಗತ್ಯ ಪರಿಹಾರ ನೀಡಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ.