ವೀರೇಂದ್ರ ನಾಗಲದಿನ್ನಿ ಹೊಸಪೇಟೆ: ವಿಶ್ವ ವಿಖ್ಯಾತ ಹಂಪಿಯಲ್ಲಿ ಜಿ-20 ರಾಷ್ಟ್ರಗಳ ಶೃಂಗಸಭೆ ಪೂರ್ವ ಸಿದ್ಧತೆಗಳು ಭರದಿಂದ ಸಾಗಿವೆ. ವಿಶ್ವದ ಅಗ್ರಗಣ್ಯ ದೇಶಗಳಿಂದ ಅತಿಥಿಗಳ ಆಗಮನ ಹಿನ್ನೆಲೆ ಹಂಪಿ ಪರಿಸರದಲ್ಲಿ ವಿಶ್ವದರ್ಜೆಯಲ್ಲಿ ಮೂಲ ಸೌಲಭ್ಯಗಳನ್ನು ಕೈಗೊಳ್ಳಲಾಗುತ್ತಿದೆ.
ಹಂಪಿಯಲ್ಲಿರುವ ಪ್ರಮುಖ ಸ್ಮಾರಕಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದ್ದು, ಪ್ರವಾಸಿಗರು ಒಂದೆರಡು ಕಿ.ಮೀ. ಕಾಲ್ನಡಿಗೆಯಲ್ಲಿ ಸಾಗುವಂತಾಗಿದೆ.
ಹಂಪಿಯಲ್ಲಿ ಜು. 13ರಿಂದ15ರ ವರೆಗೆ ಸತತ ಮೂರು ದಿನ ಜಿ-20 ರಾಷ್ಟ್ರಗಳ ಶೃಂಗಸಭೆ ನಡೆಯಲಿದೆ. ಇದರ ಭಾಗವಾಗಿ ಈಗಾಗಲೇ ಕೇಂದ್ರ ಸರ್ಕಾರದ ವಿದೇಶಾಂಗ ಸಚಿವಾಲಯ ಮತ್ತು ಸಂಸ್ಕೃತಿ ಸಚಿವಾಲಯದ ಜಂಟಿ ಕಾರ್ಯದರ್ಶಿಗಳು ಹಂಪಿಗೆ ಭೇಟಿ ನೀಡಿದ್ದಾರೆ. ವಿವಿಧ ರಾಷ್ಟ್ರಗಳ ಅಗ್ರಗಣ್ಯ ನಾಯಕರು, ಅತ್ಯುನ್ನತ ಅಧಿಕಾರಿಗಳ ತಂಡ ಆಗಮನದ ಹಿನ್ನೆಲೆಯಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕೆಂಬ ಸೂಚನೆ ಮೇರೆಗೆ ಹಂಪಿಯ ಪ್ರಮುಖ ಸ್ಮಾರಕಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ದುರಸ್ತಿ ಹಾಗೂ ಮರು ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಇದರಿಂದ ಹಲವು ಸ್ಮಾರಕಗಳ ವೀಕ್ಷಣೆ ಕೈತಪ್ಪುತ್ತಿದ್ದು, ಪ್ರವಾಸಿಗರಲ್ಲಿ ನಿರಾಸೆ ಮೂಡಿಸುತ್ತಿದೆ.
ಹಂಪಿಯಲ್ಲಿರುವ ಗಜಶಾಲೆ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರ ಕಚೇರಿ, ನೆಲಸ್ತರದ ಶಿವ ದೇವಾಲಯದಿಂದ ಹಜಾರರಾಮ ದೇವಾಲಯ, ಮಹಾನವಮಿ ದಿಬ್ಬ, ರಾಣಿಸ್ನಾನ ಗೃಹ, ವಿಜಯವಿಠ್ಠಲ ದೇಗುಲ ಸೇರಿದಂತೆ ಮತ್ತಿತರ ರಸ್ತೆಗಳ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಅದಕ್ಕಾಗಿ ಎಲ್ಲೆಡೆ ಜಲ್ಲಿಕಲ್ಲುಗಳನ್ನು ಹಾಕಿದ್ದು, ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ಹೀಗಾಗಿ ಹಂಪಿ ಪ್ರವಾಸಕ್ಕೆ ಬರುವ ಜನರು ಪಂಪಾ ವಿರೂಪಾಕ್ಷೇಶ್ವರ ದೇವಸ್ಥಾನ, ಸಾಸಿವೆ ಕಾಳು ಗಣಪ, ಕಡಲೆಕಾಳು ಗಣಪ, ಉಗ್ರ ನರಸಿಂಹ ಸ್ಮಾರಕ, ಸಾಲು ಮಂಟಪ, ಕೋದಂಡ ರಾಮ ಸನ್ನಿಧಾನ ಮತ್ತಿತರ ಪ್ರದೇಶಗಳಿಗೆ ಮಾತ್ರ ಭೇಟಿ ನೀಡುವಂತಾಗಿದೆ. ಇನ್ನುಳಿದೆಡೆ ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ಪ್ರವಾಸಿಗರು ಬಂದ ದಾರಿಗೆ ವಾಪಸ್ಸಾಗುವಂತಾಗಿದೆ.
ಹಂಪಿಯ ವಿಜಯ ವಿಠ್ಠಲ ದೇವಸ್ಥಾನಕ್ಕೆ ತೆರಳಲು ಖಾಸಗಿ ವಾಹನಗಳಿಗೆ ಪ್ರವೇಶವಿಲ್ಲ. ಹೀಗಾಗಿ ಹವಾಮಾ(ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ)ದಿಂದ ಬ್ಯಾಟರಿ ಚಾಲಿತ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಖಾಸಗಿ ವಾಹನಗಳನ್ನು ಗೆಜ್ಜೆ ಮಂಟಪದ ಬಳಿ ನಿಲ್ಲಿಸಿ, ಅಲ್ಲಿಂದ ಒಂದು ಕಿಲೋ ಮೀಟರ್ ದೂರದ ವಿಜಯ ವಿಠ್ಠಲ ದೇವಸ್ಥಾನಕ್ಕೆ ಬ್ಯಾಟರಿ ಚಾಲಿತ ವಾಹನಗಳಲ್ಲಿ ತೆರಳಬೇಕು. ಇಲ್ಲಿನ ಸಂಗೀತ ಮಂಟಪ, ಭಜನೆ ಮಂಟಪ, ಕಲ್ಲಿನರಥ ಸ್ಮಾರಕಗಳು ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿವೆ. ಅದರಂತೆ ಲೋಟಸ್ ಮಹಲ್ ಕೂಡಾ ಹಂಪಿಯ ಪ್ರಸಿದ್ಧ ಸ್ಥಳಗಳಲ್ಲಿ ಒಂದಾಗಿದೆ.
ಈ ಭಾಗದಲ್ಲಿ ರಸ್ತೆ ದುರಸ್ತಿ ಕಾರ್ಯದಿಂದ ಎರಡೂ ಮಾರ್ಗಗಳಲ್ಲಿ ಬ್ಯಾಟರಿ ಆಧಾರಿತ ವಾಹನ ಸೇವೆಯನ್ನು ಸ್ಥಗಿತಗೊಳಿಸಿದ್ದರಿಂದ ಜನರು ಬಹುದೂರದ ವರೆಗೆ ಹೆಜ್ಜೆ ಹಾಕುವುದು ಅನಿವಾರ್ಯ. ಬಿರು ಬೇಸಿಗೆಯಿಂದ ಜನರು ನಡೆದುಕೊಂಡು ಹೋಗಲು ಹಿಂದೇಟು ಹಾಕಿದರೆ, ಇನ್ನೂ ಕೆಲವರು ಹರಸಾಹಸಪಟ್ಟು ನಡೆದಾಡುತ್ತಿದ್ದಾರೆ. ಹೀಗಾಗಿ ಪ್ರಮುಖ ಸ್ಮಾರಕಗಳಿಗೆ ಭೇಟಿ ನೀಡುವವರ ಸಂಖ್ಯೆ ಕುಸಿದಿದೆ ಎನ್ನಲಾಗಿದೆ.
ಹಂಪಿಯಲ್ಲಿ ಜಿ-20 ಶೃಂಗಸಭೆ ಹಿನ್ನೆಲೆ ರಸ್ತೆ ದುರಸ್ತಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ಕೈಗೊಳ್ಳಲಾಗಿದೆ. ಅದರಂತೆ ವಿಜಯ ವಿಠ್ಠಲ ದೇಗುಲದ ಸಂಪರ್ಕ ಮಾರ್ಗದ ದುರಸ್ತಿ ನಡೆಯುತ್ತಿದ್ದರಿಂದ ಬ್ಯಾಟರಿ ಚಾಲಿತ ವಾಹನಗಳ ಸೇವೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ, ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲಾಗುತ್ತದೆ. ಸಿದ್ದರಾಮೇಶ್ವರ, ಆಯುಕ್ತ, ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ.
ಇಲ್ಲಿನ ಸ್ಮಾರಕಗಳಿಗೆ ಧಕ್ಕೆಯಾಗದಿರಲಿ ಎಂದು ಬ್ಯಾಟರಿ ವಾಹನಗಳ ಸೇವೆ ಒದಗಿಸುತ್ತಾರಂತೆ. ಈ ಹಿಂದೆ ಹಲವು ಬಾರಿ ಹಂಪಿ ಪ್ರವಾಸಕ್ಕೆ ಬಂದಾಗ ಬ್ಯಾಟರಿ ವಾಹನದಲ್ಲಿ ಸಂಚರಿಸಿದ್ದೇವು. ಉತ್ತಮ ಅನುಭವ ನೀಡಿತ್ತು. ವಿಶ್ವ ದರ್ಜೆಯ ಗಣ್ಯರು ಆಗಮಿಸುವಾಗ ಮೂಲ ಸೌಲಭ್ಯ ಕಲ್ಪಿಸುವುದು ಒಳ್ಳೆಯದೆ. ಆದರೆ ಬ್ಯಾಟರಿ ವಾಹನ ಇಲ್ಲದೇ, ವಯಸ್ಸಾದವರು ಕಾಲ್ನಡಿಗೆಯಲ್ಲಿ ಸಾಗಲು ತೊಂದರೆಯಾಗುತ್ತದೆ. ಆದಷ್ಟು ಬೇಗ ಕಾಮಗಾರಿಯನ್ನು ಮುಗಿಸಬೇಕು.ದಿನೇಶ ವಕೀಲರು ಪ್ರವಾಸಿಗರು, ಸಿಂಧನೂರು.