ಹಂಪಿ ನಮ್ಮಳ್ವರ್ ದೇವಾಲಯದ ಕೋಟೆ ಗೋಡೆ ಕುಸಿದಿರುವುದು. 
ಜಿಲ್ಲೆ

ಮತ್ತೆ ಕುಸಿದ ಸಾಲು ಮಂಟಪ

ಮಂಜುನಾಥ

ಹೊಸಪೇಟೆ: ಮಳೆಯಿಂದಾಗಿ ಹಂಪಿಯಲ್ಲಿನ ಮತ್ತೆ ಎರಡು ಸ್ಮಾರಕಗಳಿಗೆ ಹಾನಿಯಾಗಿದೆ.

ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದ ರಥ ಬೀದಿಯ ಸಾಲುಮಂಟಪದಲ್ಲಿ ಎಂಟು ಕಂಬಗಳು ಸೋಮವಾರ ಉರುಳಿದ್ದವು. ಇದೇ ಮಂಟಪಕ್ಕೆ ಅಂಟಿಕೊಂಡಿರುವ ಮತ್ತೊಂದು ಮಂಟಪ ಶುಕ್ರವಾರ ಕುಸಿದಿದೆ. ವಿಜಯ ವಿಠಲ ದೇಗುಲದಿಂದ ಪುರಂದರದಾಸರ ಮಂಟಪಕ್ಕೆ ಹೋಗುವ ದಾರಿಯಲ್ಲಿರುವ ನಮ್ಮಳ್ವರ್ ದೇವಾಲಯದ ಕೋಟೆ ಗೋಡೆಗೂ ಹಾನಿಯಾಗಿದೆ. ರಥ ಬೀದಿಯ ಸಾಲು ಮಂಟಪದ ಕೆಲ ಭಾಗ, ವಿರೂಪಾಕ್ಷೇಶ್ವರ ದೇವಾಲಯ ಹಿಂಭಾಗದಲ್ಲಿರುವ ಲೋಕಪಾವಣಿ ಪುಷ್ಕರಣಿ ಹತ್ತಿರದ ಶಿವ ಮಂದಿರದ ಗೋಡೆ, ತುಲಾಭಾರ ಮಂಟಪದ ಬಲ ಭಾಗದಲ್ಲಿರುವ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಮುಂದಿನ ಗೋಡೆ, ಕುದುರೆ ಮಂಟಪ, ಕೃಷ್ಣ ಬಜಾರ್ ಸಾಲು ಮಂಟಪ ಈಗಾಗಲೇ ಕುಸಿದಿವೆ. ಹೀಗಾಗಿ ಇನ್ನಷ್ಟು ಸ್ಮಾರಕಗಳು ಕುಸಿಯುವ ಆತಂಕ ಎದುರಾಗಿದ್ದು, ಅದಕ್ಕೂ ಮುನ್ನ ಮುಂಜಾಗ್ರತಾ ಕ್ರಮ ವಹಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ.