ಮೂಲ್ಕಿ: ಮಹಾಮಾತೆ ಮರಿಯಮ್ಮನವರ ಸೇವಾ ತತ್ಪರತೆ, ಜೀವನ ತತ್ವ, ಆದರ್ಶ ಇಂದಿನ ಯುಗದ ಜನರಿಗೆ ಮಾರ್ಗದರ್ಶಿ ಎಂದು ಮೂಲ್ಕಿ ಇಮ್ಯಾಕ್ಯುಲೇಟ್ ಕಂಸೆಪ್ಶನ್ ಚರ್ಚ್ ಧರ್ಮಗುರು ಫಾ.ಆಂಟನಿ ಶೇರಾ ಹೇಳಿದರು.
ಮೂಲ್ಕಿ ಕೆಥೋಲಿಕ್ ಕ್ರೈಸ್ತರ ತೆನೆಹಬ್ಬ, ಮರಿಯ ಮಾತೆಯ ಜನ್ಮದಿನ(ಮೋಂತಿ ಪೆಸ್ತ್) ಪ್ರಯುಕ್ತ ಸೋಮವಾರ ಮೂಲ್ಕಿ ಡಿವೈನ್ ಕಾಲ್ ಸೆಂಟರ್‌ನಲ್ಲಿ ನಡೆದ ಪ್ರಾರ್ಥನಾ ವಿಧಿಯಲ್ಲಿ ಆಶೀರ್ವಚಿಸಿ ತೆನೆಹಬ್ಬದ ಮೆರವಣಿಗೆಗೆ ಚಾಲನೆ ನೀಡಿದರು.
ವಿವಿಧ ವಾರ್ಡುಗಳ ಗುರಿಕಾರರು ಭತ್ತದ ತೆನೆಗಳೊಂದಿಗೆ ಬಾಲೆ ಮರಿಯ ಮಾತೆ ವಿಗ್ರಹವನ್ನು ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿರಿಸಿ ಮೆರವಣಿಗೆ ಮೂಲಕ ಚರ್ಚ್‌ಗೆ ತರಲಾಯಿತು. ತೆನೆ ಶುದ್ಧಿ, ಆಶೀರ್ವಚನ, ವಿಶೇಷ ಪೂಜೆಯ ಬಳಿಕ ಕಬ್ಬು, ಭತ್ತದ ತೆನೆ ಹಂಚಲಾಯಿತು. ಮೂಲ್ಕಿ ಡಿವೈನ್ ಕಾಲ್ ಸೆಂಟರ್ ನಿರ್ದೇಶಕ ಫಾ.ಅಬ್ರಹಾಂ ಡಿಸೋಜ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಓಸ್ವಲ್ಡ್ ಕೊರೆಯಾ, ಕಾರ್ಯದರ್ಶಿ ಎಡ್ವಿನ್ ಡಿಸೋಜ, ವಾರ್ಡುಗಳ ಗುರಿಕಾರರು, ಧರ್ಮಸಭಾ ಸದಸ್ಯರು ಹಾಜರಿದ್ದರು.