ಜಿಲ್ಲೆ

4.85 ಕೋಟಿ ರೂ ಮಾಸಿಕ ಸಂಭಾವನೆ ಬಾಕಿ: ಕಂದಾಯ ಸಚಿವ ಕೃಷ್ಣ ಭೈರೇಗೌಡ ಮಾಹಿತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ರಾಜ್ಯದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಗೌರವಧನ ಮತ್ತು ಕುಟುಂಬ ಮಾಸಾಶನ ಪಡೆಯುತ್ತಿರುವ ಫಲಾನುಭವಿಗಳಿಗೆ ಪಾವತಿಸಬೇಕಾದ 4.85 ಕೋಟಿ ರೂ ಮಾಸಿಕ ಸಂಭಾವನೆ ಬಾಕಿ ಇದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.

ಮಾಸಿಕ ಗೌರವ ಸಂಭಾವನೆಯನ್ನು ಪಾವತಿಸಿದೆ ಇರುವುದರಿಂದ ಆಗುತ್ತಿರುವ ತೀವ್ರ ತೊಂದರೆ ಆಗಿರುವ ಕುರಿತು ವಿಧಾನ ಪರಿಷತ್‌ನಲ್ಲಿ ಎಂಎಲ್‌ಸಿ ಮಧು ಜಿ.ಮಾದೇಗೌಡ ಪ್ರಶ್ನೆಗೆ ಸಚಿವರು ಲಿಖಿತ ಉತ್ತರ ನೀಡಿರುವ ಸಚಿವ, ಸ್ವಾತಂತ್ರ್ಯ ಹೋರಾಟಗಾರರು ಮತ್ತು ಕುಟುಂಬ ಮಾಸಾಶನ ಪಡೆಯುತ್ತಿರುವ ಫಲಾನುಭವಿಗಳಿಗೆ ಮಾಸಿಕ 10 ಸಾವಿರ ರೂ ಗೌರವ ಸಂಭಾವನೆ ಪಾವತಿಸಲಾಗುತ್ತಿದೆ. ಚಾಮರಾಜನಗರ, ಹಾಸನ, ಉಡುಪಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮಾಸಿಕ ಸಂಭಾವನೆ ಪಾವತಿಸಲು ಬಾಕಿ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ಯಾವ ಜಿಲ್ಲೆ, ಎಷ್ಟು ಬಾಕಿ?: ಬೆಳಗಾವಿ 83,34 ಲಕ್ಷ ರೂ, ಧಾರವಾಡ 76.33 ಲಕ್ಷ ರೂ, ಬೆಂಗಳೂರು(ನಗರ) 59.02 ಲಕ್ಷ ರೂ, ಶಿವಮೊಗ್ಗ 39.30 ಲಕ್ಷ ರೂ, ತುಮಕೂರು 36.40 ಲಕ್ಷ ರೂ, ಹಾವೇರಿ 29.99 ಲಕ್ಷ ರೂ, ಮಂಡ್ಯ 19.70 ಲಕ್ಷ ರೂ, ಚಿತ್ರದುರ್ಗ 18.14 ಲಕ್ಷ ರೂ, ಬೀದರ್ 17.17 ಲಕ್ಷ ರೂ, ಉತ್ತರ ಕನ್ನಡ 17.12 ಲಕ್ಷ ರೂ, ಕೋಲಾರ 14.50 ಲಕ್ಷ ರೂ, ಮೈಸೂರು 12.00 ಲಕ್ಷ ರೂ, ಕಲಬುರಗಿ 10.79 ಲಕ್ಷ ರೂ, ವಿಜಯನಗರ ಮತ್ತು ಗದಗ 9.2 ಲಕ್ಷ ರೂ, ದಕ್ಷಿಣಕನ್ನಡ 6.7 ಲಕ್ಷ ರೂ, ಚಿಕ್ಕಬಳ್ಳಾಪುರ 5.3 ಲಕ್ಷ ರೂ, ವಿಜಯಪುರ 5.13 ಲಕ್ಷ ರೂ, ಚಿಕ್ಕಮಗಳೂರು 4.7 ಲಕ್ಷ ರೂ, ರಾಯಚೂರು 1.3 ಲಕ್ಷ ರೂ, ಕೊಪ್ಪಳ 3.5 ಲಕ್ಷ ರೂ, ಬೆಂಗಳೂರು(ಗ್ರಾ) 3.4 ಲಕ್ಷ ರೂ, ಬಳ್ಳಾರಿ 1.3 ಲಕ್ಷ ರೂ, ರಾಮನಗರ 90 ಸಾವಿರ ರೂ, ಕೊಡಗು 80 ಸಾವಿರ ರೂ, ಬಾಗಲಕೋಟೆ 33 ಸಾವಿರ ರೂ, ದಾವಣಗೆರೆ 10 ಸಾವಿರ ರೂ ಬಾಕಿ ಇದೆ.

ಬಳ್ಳಾರಿ, ಬೆಂಗಳೂರು(ಗ್ರಾ), ಚಾಮರಾಜನಗರ, ವಿಜಯಪುರ, ಉಡುಪಿ, ಕೊಡಗು, ಕೋಲಾರ, ಹಾವೇರಿ, ಗದಗ ಮತ್ತು ದಕ್ಷಿಣ ಕನ್ನಡ ಸೇರಿದಂತೆ 10 ಜಿಲ್ಲೆಯಲ್ಲಿ ಜೀವಂತವಿರುವ ಸ್ವಾತಂತ್ರ್ಯ ಹೋರಾಟಗಾರರ ಯಾರೂ ಇಲ್ಲ. ಆದರೆ, ಪ್ರಸ್ತುತ ವಿವಿಧ ಜಿಲ್ಲೆಗಳಲ್ಲಿ ಜೀವಂತವಿರುವ, ರಾಜ್ಯ ಸ್ವಾತಂತ್ರ್ಯ ಹೋರಾಟಗಾರರ ಗೌರವಧನ ಪಡೆಯುತ್ತಿರುವ ಫಲಾನುಭವಿಗಳ ಒಟ್ಟು ಸಂಖ್ಯೆ 150 ಇದೆ ಎಂದೂ ತಿಳಿಸಿದ್ದಾರೆ.

ಕಟ್ಟಡವಿಲ್ಲದವರಿಗೆ ಪರ್ಯಾಯ ವ್ಯವಸ್ಥೆ

ಸ್ವಂತ ಕಚೇರಿ ಹೊಂದಿರದ ಗ್ರಾಮ ಆಡಳಿತ ಅಧಿಕಾರಿಗಳಿಗೆ ಗ್ರಾಮ ಪಂಚಾಯಿತಿ ಹಾಗೂ ಇತರೆ ಸರ್ಕಾರಿ ಕಟ್ಟಡಗಳಲ್ಲಿ ಕಚೇರಿ ವ್ಯವಸ್ಥೆ ಮಾಡಿ ಜನರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.

ಗ್ರಾಮ ಆಡಳಿತ ಅಧಿಕಾರಿಗಳಿಗೆ ಕರ್ತವ್ಯ ನಿರ್ವಹಿಸಲು ನಿರ್ದಿಷ್ಟ ಸ್ಥಳದಲ್ಲಿ ಕಚೇರಿ ಇಲ್ಲದಿರುವುದರಿಂದ ಜನರಿಗೆ ತೊಂದರೆ ಆಗುತ್ತಿರುವ ಬಗ್ಗೆ ವಿಧಾನ ಪರಿಷತ್‌ನಲ್ಲಿ ಎಂಎಲ್‌ಸಿ ಮಧು ಮಾದೇಗೌಡ ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ಕಲಂ2(5)ರಲ್ಲಿ ಅಗತ್ಯಪಡಿಸಲಾದಂತೆ ಗ್ರಾಮ ಆಡಳಿತ ಅಧಿಕಾರಿಗಳಿಗೆ ಕಚೇರಿ ಸ್ಥಳವನ್ನು ನಿಗದಿಪಡಿಸಿ ತಾಲ್ಲೂಕುವಾರು ಅಧಿಸೂಚನೆಯನ್ನು ಹೊರಡಿಸಲಾಗಿರುತ್ತದೆ. ಮಂಡ್ಯ ಜಿಲ್ಲೆಯಲ್ಲಿ ವೃತ್ತಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 416 ವಿ.ಎ.ಎ.ಗಳಿಗೆ ಕಚೇರಿ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಮಂಡ್ಯ ನಗರಸಭೆಗೆ ಸೇರಿದ ಒಟ್ಟು 47 ನಿವೇಶನಗಳಿದ್ದು, ಅತಿಕ್ರಮ ತಪ್ಪಿಸಲು ಸರ್ವೇ ಕೈಗೊಂಡು ಫೆನ್ಸಿಂಗ್ ಹಾಕಿ ನಾಮಫಲಕ ಅಳವಡಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ತಿಳಿಸಿದ್ದಾರೆ.

ಎಂಎಲ್‌ಸಿ ಮಧು ಜಿ.ಮಾದೇಗೌಡರ ಪ್ರಶ್ನೆಗೆ ವಿಧಾನ ಪರಿಷತ್‌ನಲ್ಲಿ ಲಿಖಿತ ಉತ್ತರ ನೀಡಿರುವ ಸಚಿವರು, ನಗರಸಭೆಗೆ ಸೇರಿದ ಆಸ್ತಿಗಳ ರಕ್ಷಣೆ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ವಾರ್ಡ್ 12ರಲ್ಲಿ 5 ನಿವೇಶನ, ವಾರ್ಡ್ 15ರಲ್ಲಿ 7, ವಾರ್ಡ್ 22ರಲ್ಲಿ 6, ವಾರ್ಡ್ 23ರಲ್ಲಿ 22 ಹಾಗೂ ವಾರ್ಡ್ 27ರಲ್ಲಿ 7 ನಿವೇಶನ ಸೇರಿದಂತೆ ಒಟ್ಟು 47 ನಿವೇಶನಗಳಿವೆ. ಈ ಎಲ್ಲ ನಿವೇಶನಗಳ ಸರ್ವೇ ಕೈಗೊಂಡು ನಗರಸಭೆ ನಿಧಿಯಿಂದ ಫೆನ್ಸಿಂಗ್ ಹಾಕಿ ನಾಮಫಲಕ ಅಳವಡಿಸಲು ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಅಲ್ಲದೆ, ನಗರಸಭೆ ವ್ಯಾಪ್ತಿಯಲ್ಲಿ 19 ಸ್ಮಶಾನಗಳಿದ್ದು, ರಾಜ್ಯ ಹಣಕಾಸು ಅನುದಾನ, ಕೇಂದ್ರ ಹಣಕಾಸು ಅನುದಾನ, ಎಸ್.ಎ್.ಸಿ. ವಿಶೇಷ ಅನುದಾನ, ನಗರಸಭಾ ನಿಧಿ ಸೇರಿದಂತೆ ಇನ್ನಿತರೆ ಅನುದಾನದಲ್ಲಿ ಸ್ಮಶಾನಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಅಭಿವೃದ್ಧಿ ಕಾರ್ಯಗಳು ಚಾಲ್ತಿಯಲ್ಲಿರುತ್ತವೆ ಎಂದು ವಿವರಿಸಿದ್ದಾರೆ.