ಜಿಲ್ಲೆ

ಅರ್ಹರಿಗೆಲ್ಲ ಗ್ಯಾರಂಟಿ ಯೋಜನೆ ತಲುಪಲಿ: ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಎಚ್.ಕೆ.ರುದ್ರಪ್ಪ ಹೇಳಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ರಾಜ್ಯಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಯ ಲಾಭ ಪ್ರತಿಯೊಬ್ಬ ಫಲಾನುಭವಿಗಳಿಗೂ ತಲುಪಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಮಂಡ್ಯ ತಾಲೂಕು ಅಧ್ಯಕ್ಷ ಎಚ್.ಕೆ.ರುದ್ರಪ್ಪ ಹೇಳಿದರು.

ನಗರದಲ್ಲಿ ತಾಲೂಕು ಪಂಚಾಯಿತಿ ಕಚೇರಿಯ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ಆಯೋಜಿಸಿದ್ದ ಮಾಸಿಕ ಪ್ರಗತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಂಚ ಗ್ಯಾರಂಟಿ ಯೋಜನೆಗಳಿಂದ ಫಲಾನುಭವಿಗಳು ಆರ್ಥಿಕ ಸಬಲೀಕರಣಗೊಳ್ಳುತ್ತಿದ್ದಾರೆ. ಒಂದಷ್ಟು ತಾಂತ್ರಿಕ ಮತ್ತು ಫಲಾನುಭವಿಗಳ ದೃಢೀಕರಣ ಪತ್ರಗಳ ದೋಷದಿಂದ ಕೆಲವರಿಗೆ ತಡವಾಗುತ್ತಿದೆ. ಇದನ್ನು ಅಧಿಕಾರಿಗಳು ಸರಿಪಡಿಸಬೇಕು ಎಂದರು.

ತಾಲೂಕಿನಲ್ಲಿ ಗೃಹಲಕ್ಷ್ಮೀ ಯೋಜನೆಯಡಿ 1,68 ಲಕ್ಷಕ್ಕೂ ಹೆಚ್ಚು ಜನ ಫಲಾನುಭವಿಗಳಿದ್ದಾರೆ. ಇವರಲ್ಲಿ ಕೆಲವರು ಹಣವನ್ನು ಸಂಗ್ರಹಿಸಿ ಸ್ವ ಉದ್ಯೋಗ, ಉದ್ಯಮ ಸ್ಥಾಪಿಸಿದ್ದಾರೆ. ವಿಧವೆಯರಿಗೆ ಅನುಕೂಲವಾಗಿದೆ. ಹಲವರು ಹೈನುಗಾರಿಕೆ ಆರಂಭಿಸಿದ್ದಾರೆ, ಹೊಲಿಗೆಯಂತ್ರ ಪಡೆದು ದುಡಿಯುತ್ತಿದ್ದಾರೆ. ಮಂಡ್ಯ ತಾಲೂಕಿಗೆ ಕೋಟ್ಯಂತರ ರೂ.ಗಳನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತಿದೆ ಎಂದು ಹೇಳಿದರು.

ತಾ.ಪಂ ಇಒ ವೀಣಾ, ಸಮಿತಿ ಸದಸ್ಯರಾದ ಅರಸು, ನಸ್ರಿನ್, ಪ್ರತಾಪ್, ಅಪ್ಪಾಜಿ, ಯೋಗೇಶ್, ವೆಂಕಟರಮಣಗೌಡ ಇತರರಿದ್ದರು.