ಹಗರಿಬೊಮ್ಮನಹಳ್ಳಿ ಬಸವೇಶ್ವರ ವೃತ್ತದಲ್ಲಿ ದೇವದಾಸಿ ವಿಮೋಚನಾ ಸಂಘಟನೆಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಉಪ ತಹಸೀಲ್ದಾರ್ ಶಿವಕುಮಾರ ಗೌಡ ಅವರಿಗೆ ಮನವಿ ಸಲ್ಲಿಸಲಾಯಿತು. ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಮಾಳಮ್ಮ, ತಾಲೂಕು ಅನುಷ್ಠಾನಾಧಿಕಾರಿ ಎಸ್.ಕಲ್ಪನಾ ಇತರರಿದ್ದರು. 
ಜಿಲ್ಲೆ

ಮಾಸಿಕ ವೇತನ ಸಮರ್ಪಕವಾಗಿ ವಿತರಣೆಯಾಗಲಿ

ರುದ್ರಪ್ಪ ವಾಲಿ

ಹಗರಿಬೊಮ್ಮನಹಳ್ಳಿ: ದೇವದಾಸಿಯರಿಗೆ ಹೆಚ್ಚಳಗೊಂಡ ಮಾಸಿಕ ವೇತನವನ್ನು ಕೂಡಲೆ ಬಿಡುಗಡೆ ಮಾಡಬೇಕು ಹಾಗೂ ಗಣತಿ ಪಟ್ಟಿಯಿಂದ ಬಿಟ್ಟು ಹೋದವರನ್ನು ಪಟ್ಟಿಯಲ್ಲಿ ಸೇರ್ಪಡೆಮಾಡಬೇಕೆಂದು ಆಗ್ರಹಿಸಿ ದೇವದಾಸಿ ವಿಮೋಚನಾ ಸಂಘದಿಂದ ಪಟ್ಟಣದ ಬಸವೇಶ್ವರ ಬಜಾರದಲ್ಲಿ ಮಂಗಳವಾರ ಪ್ರತಿಭಟನೆ ಮಾಡಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಮಾಳಮ್ಮ ಮಾತನಾಡಿ, ರಾಜ್ಯಾದ್ಯಂತ ನಿರಂತರ ಹೋರಾಟದಿಂದ ದೇವದಾಸಿಯರಿಗೆ ಕಳೆದ ಬಜೆಟ್‌ನಲ್ಲಿ 500ರೂ. ಹೆಚ್ಚಳವಾಗಿದ್ದರೂ ಜಾರಿಯಾಗಿಲ್ಲ. ಮಾಸಿಕ ವೇತನ ಕೂಡ ಇಲ್ಲಿಯವರೆಗೂ ತಲುಪಿಲ್ಲ. ಸಾವಿರಾರು ಎಕರೆ ಭೂಮಿಗಳನ್ನು ತೀರ ಕಡಿಮೆ ಬೆಲೆಗೆ ಜಿಂದಾಲ್‌ನಂತ ಕಂಪನಿಗಳಿಗೆ ಕೊಡುವ ಸರ್ಕಾರಗಳು. ಬಡತನದಲ್ಲಿಯೇ ಜೀವನ ನಿರ್ವಹಣೆ ಮಾಡುವ ಕುಟುಂಬಗಳಿಗೆ ನೀಡುತ್ತಿಲ್ಲ. ಸಾಗುವಳಿ ಮಾಡಿಕೊಂಡವರನ್ನು ಒಕ್ಕಲೆಬ್ಬಿಸುತ್ತಿದ್ದಾರೆ ಎಂದರು.

ಈಶ್ವರ ದೇಗುಲದಿಂದ ಮೆರವಣಿಗೆ ಮೂಲಕ ಬಸವೇಶ್ವರ ವೃತ್ತದವರೆಗೆ ಸಾಗಿ ಉಪ ತಹಸೀಲ್ದಾರ್ ಶಿವಕುಮಾರ ಗೌಡರಿಗೆ ಹಾಗೂ ಸಿಡಿಪಿಒ ಬೋರೆಗೌಡರಿಗೆ ಮನವಿ ಸಲ್ಲಿಸಿದರು. ತಾಲೂಕು ಅನುಷ್ಠಾನಾಧಿಕಾರಿ ಎಸ್.ಕಲ್ಪನಾ, ಸಂಘಟನೆಯ ತಾಲೂಕು ಮುಖಂಡರಾದ ಬಿ.ಮೈಲಮ್ಮ, ಚಾಂದಬೀ, ದೊಡ್ಡಬಸಮ್ಮ ದುರುಗಮ್ಮ, ನಿಂಗಮ್ಮ ಇತರರಿದ್ದರು.