ಜಿಲ್ಲೆ

ಉದ್ಯಾನ, ಮೈದಾನಗಳ ಸ್ಥಿತಿಗತಿಗೆ ತಿಂಗಳ ಗಡುವು: ಬಿಬಿಎಂಪಿ ಮುಖ್ಯ ಆಯುಕ್ತರ ಸೂಚನೆ

ಬೆಂಗಳೂರು: ಬಿಬಿಎಂಪಿ ದಕ್ಷಿಣ ವಲಯ ವ್ಯಾಪ್ತಿಯಲ್ಲಿನ ಉದ್ಯಾನ, ಮೈದಾನ ಹಾಗೂ ಕೆರೆಗಳ ಸ್ಥಿತಿಗತಿ ಕುರಿತಂತೆ ಒಂದು ತಿಂಗಳಲ್ಲಿ ವರದಿ ಸಲ್ಲಿಸಲು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಂಗಳವಾರ ಆಯೋಜಿಸಿದ್ದ ಮುಖ್ಯ ಆಯುಕ್ತರ ನಡೆ ವಲಯದ ಕಡೆಗೆ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ವೇಳೆ ಮಾತನಾಡಿದ ಅವರು, ಉದ್ಯಾನ, ಮೈದಾನ ಮತ್ತು ಕೆರೆಗಳಿಗೆ ಸಂಬಂಧಿಸಿದಂತೆ ಪ್ರತಿ ಸ್ಥಳಕ್ಕೂ ಅಧಿಕಾರಿಗಳು ಖುದ್ದು ಭೇಟಿ ನಿಡಿ ಜಿಯೋ ಲೊಕೇಶನ್ ಸಮೇತ ಛಾಯಾಚಿತ್ರ ತೆಗೆದು ವರದಿ ಸಿದ್ಧಪಡಿಸಬೇಕು. ಕ್ರೋಡೀಕರಿಸಿದ ರೂಪದಲ್ಲಿ ವರದಿಯನ್ನು ಗಡುವಿನೊಳಗೆ ಸಲ್ಲಿಸುವಂತೆ ಸೂಚಿಸಿದರು.

ಚಿಕ್ಕಪೇಟೆ ವ್ಯಾಪ್ತಿಯಲ್ಲಿ ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆ ಹೆಚ್ಚಾಗಿರುವುದರಿಂದ ಸುತ್ತಮುತ್ತಲಿನ ನಿವಾಸಿಗಳಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಈ ಸಮಸ್ಯೆ ಬಗೆಹರಿಸುವ ಸಂಬಂಧ ಅಂತಹವುಗಳನ್ನು ಸ್ಥಳ ಪರಿಶೀಲನೆ ನಡೆಸಿ ವಾಣಿಜ್ಯ ಚಟುವಟಿಕೆ ನಡೆಸುತ್ತಿದ್ದಲ್ಲಿ ಕ್ರಮ ಕೈಗೊಳ್ಳಲು ವಲಯ ಆರೋಗ್ಯಾಧಿಕಾರಿಗೆ ನಿರ್ದೇಶಿಸಿದರು.

ಅನಧಿಕೃತ ವ್ಯಾಪಾರಿಗಳನ್ನು ತೆರವುಗೊಳಿಸಿ:

ಗಾಂಧಿ ಬಜಾರ್ ಮಾರುಕಟ್ಟೆಯಲ್ಲಿ ವ್ಯಾಪಾರಿಗಳಿಗಾಗಿ ಕಟ್ಟೆಗಳನ್ನು ನಿರ್ಮಿಸಲಾಗಿದೆ. ಇವುಗಳನ್ನು ಹೊರತುಪಡಿ ಬೇರೆ ಕಡೆ ವ್ಯಾಪಾರ ಮಾಡುವವರನ್ನು ತೆರವುಗೊಳಿಸಬೇಕು. ಪಾಲಿಕೆಯಿಂದ ಅನುಮತಿ ನೀಡಿರುವ ಸ್ಥಳಗಳಲ್ಲಿ ಮಾತ್ರ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಬೇಕು. ಇದೇ ಶನಿವಾರ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುತ್ತಿರುವ ಹಾಗೂ ಶಾಶ್ವತ ಪೆಟ್ಟಿಗಳನ್ನಿಟ್ಟುಕೊಂಡವರನ್ನು ತೆರವುಗೊಳಿಸಲು ಸೂಚನೆ ನೀಡಿದರು.

ಜಯನಗರದ ಗುರಪ್ಪನಪಾಳ್ಯದಲ್ಲಿ ಸಮುದಾಯ ಭವನ ನಿರ್ಮಾಣವಾಗಿ 4 ವರ್ಷಗಳಾಗಿವೆ. ಆದರೂ, ಭವನವನ್ನು ಸಾರ್ವಜನಿಕರಿಗೆ ಮುಕ್ತಮಾಡಿಲ್ಲ. ಇದಕ್ಕೆ ಕಾರಣ ತಿಳಿಯಲು ಅಧಿಕಾರಿಗಳು ಸ್ಥಳ ಪರಿಶೀಲಿಸಿ ಬಾಕಿ ಕಾಮಗಾರಿಗೆ ಅದಾಂಜು ಪಟ್ಟಿ ಸಿದ್ದಪಡಿಸಿ ಕಾಮಗಾರಿಯನ್ನು ಪೂರ್ಣಗೊಳಿಸಿ ತ್ವರಿತವಾಗಿ ಸಾರ್ವಜನಿಕ ಉಪಯೋಗಕ್ಕೆ ಅನುವು ಮಾಡಿಕೊಡಲು ಮುಖ್ಯ ಆಯುಕ್ತರು ಸೂಚನೆ ನೀಡಿದರು.

ಈ ವೇಳೆ ವಲಯ ಆಯುಕ್ತರಾದ ವಿನೋತ್ ಪ್ರಿಯಾ, ವಲಯ ಜಂಟಿ ಆಯುಕ್ತ ಶಿವಕುಮಾರ್, ಉಪ ಆಯುಕ್ತ ಡಿ.ಕೆ ಬಾಬು, ಕಾರ್ಯಪಾಲಕ ಅಭಿಯಂತರರು ಹಾಗೂ ಇನ್ನಿತರರಿದ್ದರು.

ನಾಗರಿಕರಿಂದ ಕೇಳಿಬಂದ ಪ್ರಮುಖ ದೂರುಗಳು:

* ವಿಶ್ವೇಶ್ವರಪುರ ಜಂಕ್ಷನ್‌ನಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವುದರಿಂದ ಸಮಸ್ಯೆಗೆ ಪರಿಹಾರ ಸೂಚಿಸುವುದು.

* ದೊಡ್ಡ ಗಣಪತಿ ದೇಗುಲದ ಬಳಿ ಸಾರ್ವಜನಿಕ ಶೌಚಾಲಯ ನಿರ್ಮಾಣ.

* ರಸ್ತೆಬದಿ ಎಲ್ಇಡಿ ನಾಮಫಲಕ ಅಳವಡಿಸಿರುವುನ್ನು ತೆರವುಗೊಳಿಸಬೇಕು.

* ಅಪಾಯಕಾರಿ ಸ್ಥಿತಿಯಲ್ಲಿರುವ ಮರ, ಟೊಂಗೆಗಳನ್ನು ತೆರವುಗೊಳಿಸಬೇಕು.

* ಬಿಡಾಡಿ ದನಗಳು ರಸ್ತೆ ಮೇಲೆ ಓಡಾಡುತ್ತಿದ್ದು ಅವುಗಳನ್ನು ನಿಯಂತ್ರಿಸಬೇಕು.

* ರಸ್ತೆ ಬದಿ ಕಟ್ಟಡ ತ್ಯಾಜ್ಯ ಸುರಿಯುತ್ತಿರುವುದನ್ನು ತಕ್ಷಣವೇ ನಿಯಂತ್ರಿಸಬೇಕು.

* ಸೌತ್ ಎಂಡ್ ವೃತ್ತದ ಸರ್ವೀಸ್ ರಸ್ತೆಯಲ್ಲಿ ಬೀದಿ ದೀಪಗಳನ್ನು ಅಳವಡಿಸಲು ಮನವಿ.