ಕನ್ಯಾಮರಿಯಮ್ಮಳ ಜನ್ಮದಿನ ಸಂಭ್ರಮ
ಹೊಸ ಭತ್ತದ ತೆನೆಗೆ ಆಶೀರ್ವಾದ, ಬಲಿಪೂಜಾ
ಜಿಲ್ಲಾದ್ಯಂತ ಕ್ರೈಸ್ತ ಬಾಂಧವರು ಕನ್ಯಾಮರಿಯಮ್ಮಳ ಜನ್ಮದಿನದ ನಿಮಿತ್ತ ಸೆಪ್ಟೆಂಬರ್ 8ರಂದು ಸಂಭ್ರಮದಿಂದ ಮೊಂತಿ ಫೆಸ್ಟ್ ಆಚರಿಸಿದರು. ಧರ್ಮಗುರುಗಳು ಸಾರ್ವಜನಿಕ ಸ್ಥಳಗಳಲ್ಲಿ ಆಯಾ ಊರಿನ ಗುರಿಕಾರರು ತಮ್ಮ ಹೊಲಗಳಿಂದ ಆರಿಸಿ ತಂದ ಹೊಸ ಭತ್ತದ ತೆನೆಗಳಿಗೆ ಆಶೀರ್ವದಿಸಿದರು.
ಪುಟ್ಟ ಮಕ್ಕಳು ಕನ್ಯಾಮರಿಯಮ್ಮಳ ಮೂರ್ತಿಗೆ ಹೂ ಸಮರ್ಪಿಸಿದ ಬಳಿಕ ಜಿಲ್ಲೆಯ ಎಲ್ಲ ಚರ್ಚ್ಗಳಲ್ಲಿ ಧರ್ಮ ಗುರುಗಳು ಭತ್ತದ ತೆನೆಗೆ ಆಶೀರ್ವದಿಸಿ, ಪವಿತ್ರ ಬಲಿಪೂಜೆಯಲ್ಲಿ ಪಾಲ್ಗೊಂಡರು. ಧರ್ಮಗುರುಗಳು ಕುಟುಂಬ ಜೀವನ ಹಾಗೂ ಸಮಾಜದಲ್ಲಿ ಮಹಿಳೆಯ ಸ್ಥಾನ&ಮಾನದ ಕುರಿತು ಪ್ರವಚನ ನೀಡಿದರು.
ಭತ್ತದ ತೆನೆಗೆ ಪೂಜೆ
ಉಡುಪಿಯ ಶೋಕ ಮಾತಾ ಇಗರ್ಜಿಯಲ್ಲಿ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಹೊಸ ಭತ್ತದ ತೆನೆಗೆ ಆಶೀರ್ವದಿಸಿದರು. ಚರ್ಚ್ನ ಧರ್ಮಗುರು ವಂ.ಚಾರ್ಲ್ಸ್ ಮಿನೇಜಸ್ ಉಪಸ್ಥಿತರಿದ್ದರು. ತೊಟ್ಟಂ ಸಂತ ಅನ್ನಮ್ಮ ದೇವಾಲಯದಲ್ಲಿ ಪ್ರಧಾನ ಧರ್ಮಗುರು ವಂ.ಡೆನಿಸ್ ಡೆಸಾ, ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ನಲ್ಲಿ ಧರ್ಮಪ್ರಾಂತ್ಯದ ಶ್ರೇಷ್ಠ ಧರ್ಮಗುರು ವಂ.ಫರ್ಡಿನಾಂಡ್ ಗೊನ್ಸಾಲ್ವಿಸ್, ಶಿರ್ವ ಆರೋಗ್ಯ ಮಾತಾ ಇಗರ್ಜಿಯಲ್ಲಿ ವಂ.ಲೆಸ್ಲಿ ಡಿಸೋಜ, ಕಾರ್ಕಳದ ಅತ್ತೂರು ಸಂತ ಲಾರೆನ್ಸ್ ಬಾಸಿಲಿಕಾದಲ್ಲಿ ವಂ.ಆಲ್ಬನ್ ಡಿಸೋಜ, ಸಾಸ್ತಾನ ಸಂತ ಅಂತೋನಿ ದೇವಾಲಯದಲ್ಲಿ ವಂ.ಸುನೀಲ ಡಿಸಿಲ್ವ ನೇತೃತ್ವದಲ್ಲಿ ಹಬ್ಬದ ಪ್ರಯುಕ್ತ ಬಲಿಪೂಜೆ ನಡೆದವು.
ಜಿಲ್ಲೆಯ ಎಲ್ಲ ಚರ್ಚ್ಗಳಲ್ಲಿಯೂ ಸಹ ಧರ್ಮಗುರುಗಳ ನೇತೃತ್ವದಲ್ಲಿ ಬಲಿಪೂಜೆ ಆಚರಣೆ ನಡೆದವು. ಧರ್ಮಗುರುಗಳು ಪ್ರತಿ ಕುಟುಂಬಕ್ಕೆ ಆಶೀರ್ವದಿಸಿದ ಹೊಸ ಭತ್ತದ ತೆನೆ ನೀಡಿ ಹರಸಿದರು. ಚಿಕ್ಕ ಮಕ್ಕಳಿಗೆ ಸಿಹಿತಿಂಡಿ, ಕಬ್ಬು ವಿತರಿಸಲಾಯಿತು.
ಮನೆಯಲ್ಲಿ ಸಸ್ಯಾಹಾರ ಭೋಜನ
ಇಗರ್ಜಿಯಿಂದ ಮನೆಗೆ ತಂದ ಭತ್ತದ ತೆನೆಯನ್ನು ಕುಟುಂಬದ ಹಿರಿಯರು ದೇವರ ಪೀಠದ ಮೇಲಿಟ್ಟು ಪ್ರಾರ್ಥನೆ ಸಲ್ಲಿಸಿದರು. ತೆನೆಗಳನ್ನು ಸುಲಿದು ಕುಟುಂಬದ ಸದಸ್ಯರೊಂದಿಗೆ ಪಾಯಸ ಹಾಗೂ ಹಾಲಿನೊಂದಿಗೆ ಸೇವಿಸಿದರು. ಸಂಪೂರ್ಣ ಸಸ್ಯಹಾರದ ಭೋಜನ ತಯಾರಿಸಿ ಕುಟುಂಬದ ಎಲ್ಲ ಸದಸ್ಯರು ನೆಲದ ಮೇಲೆ ಕುಳಿತು ಬಾಳೆಎಲೆಯಲ್ಲಿ ಊಟ ಮಾಡಿದರು.
ಹಿಂದುಗಳಿಗೆ ಹಬ್ಬದ ಮೊದಲ ಗೌರವ
ಸೌಹಾರ್ದತೆಗೆ ಹೆಸರಾದ ತೊಟ್ಟಂ ಚರ್ಚ್ನಲ್ಲಿ ಹಿಂದು ಕುಟುಂಬಕ್ಕೆ ಮೊದಲ ತೆನೆ ಹಸ್ತಾಂತರಿಸುವ ವಾಡಿಕೆಯಿದೆ. ಚರ್ಚ್ ವ್ಯಾಪ್ತಿಯ ಬಾಬಣ್ಣ ಪೂಜಾರಿ ಎಂಬವರ ಕುಟುಂಬದವರು ಚರ್ಚ್ನ ಅಗತ್ಯತೆಗೆ ಬೇಕಿದ್ದ ಸ್ಥಳ ನೀಡಿದ್ದರಿಂದ ಅದಕ್ಕೆ ಕೃತಜ್ಞಾತಾ ಪೂರ್ವಕವಾಗಿ ಪ್ರತಿವರ್ಷ ತೆನೆ ಹಬ್ಬದಂದು ಅವರ ಕುಟುಂಬಕ್ಕೆ ಮೊದಲ ತೆನೆ ಹಸ್ತಾಂತರಿಸಲಾಯಿತು. ಆ ಕುಟುಂಬದ ಪರವಾಗಿ ಪುಟ್ಟಯ್ಯ ಪೂಜಾರಿ ಅವರು ಹಬ್ಬದಲ್ಲಿ ಪಾಲ್ಗೊಂಡು ಧರ್ಮಗುರು ವಂ.ಡೆನಿಸ್ ಡೆಸಾ ಅವರಿಂದ ಗೌರವ ಪೂರ್ವಕವಾಗಿ ತೆನೆ ಸ್ವೀಕರಿಸಿದರು. ಚರ್ಚ್ನ ನೆರೆಮನೆಯವರಾದ ಹಾಗೂ ಚರ್ಚ್ನ ಕೆಲಸಗಳಲ್ಲಿ ಸದಾ ಸಹಾಯ ಹಸ್ತ ಚಾಚುವ ಪ್ರಭಾಕರ ಅವರಿಗೂ ಸಹ ತೆನೆ ಹಸ್ತಾಂತರಿಸಲಾಯಿತು.