Women and Child Development Minister Lakshmi Hebbalkar inaugurated the Government Montessori (L.K.G, UKG) classes which have been started under the comprehensive infant scheme of the State Women and Child Development Department for the first time in the entire country, in Bengaluru on Monday 22nd July 2024 
ಜಿಲ್ಲೆ

‘ಸರ್ಕಾರಿ ಮಾಂಟೆಸ್ಸೆರಿ’ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಚಾಲನೆ

ಬೆಂಗಳೂರು: ಗುಣಮಟ್ಟದ ಶಿಕ್ಷಣ, ಪೌಷ್ಠಿಕ ಆಹಾರ ಎಲ್ಲಾ ವರ್ಗದ ಮಕ್ಕಳಿಗೂ ದೊರೆಯಬೇಕೆಂಬ ಆಶಯದೊಂದಿಗೆ ರಾಜ್ಯ ಸರ್ಕಾರ ದೇಶದಲ್ಲೇ ಮೊದಲ ಬಾರಿಗೆ ಅಂಗನವಾಡಿ ಕೇಂದ್ರಗಳಲ್ಲಿ ‘ಸರ್ಕಾರಿ ಮಾಂಟೆಸ್ಸೆರಿ’ ಹಾಗೂ ಪೂರ್ವ ಪ್ರಾಥಮಿಕ ತರಗತಿ(ಎಲ್‌ಕೆಜಿ-ಯುಕೆಜಿ)ಗಳನ್ನು ಆರಂಭಿಸಿದೆ.

ಬೆಂಗಳೂರಿನ ಗೋವಿಂದರಾಜನಗರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಪಟ್ಟೇಗಾರ ಪಾಳ್ಯದಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಆರಂಭಿಸಿರುವ ‘ಸರ್ಕಾರಿ ಮಾಂಟೆಸ್ಸೆರಿ’ ಹಾಗೂ ಪೂರ್ವ ಪ್ರಾಥಮಿಕ ತರಗತಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೋಮವಾರ ಚಾಲನೆ ನೀಡಿ ಮಾತನಾಡಿದರು.

ಮಕ್ಕಳ ಆರಂಭಿಕ ಶಿಕ್ಷಣ ಮತ್ತು ಆರೈಕೆಯಲ್ಲಿ ಸಾಮರ್ಥ್ಯ ಅಭಿವೃದ್ಧಿಗೆ ನಮ್ಮ ಸರ್ಕಾರ ಒತ್ತು ನೀಡಿದೆ. ಈ ನಿಟ್ಟಿನಲ್ಲಿ ಅಂಗನವಾಡಿ ಕೇಂದ್ರಗಳ ಉನ್ನತೀಕರಣದೊಂದಿಗೆ ರಾಜ್ಯಾದ್ಯಂತ 5 ಸಾವಿರ ಮಾಂಟೆಸ್ಸೆರಿ ಹಾಗೂ ಪೂರ್ವ ಪ್ರಾಥಮಿಕ ತರಗತಿಗಳನ್ನು ತೆರೆಯಲು ಸಿದ್ಧತೆ ನಡೆಸಲಾಗಿದ್ದು, ಹಂತ ಹಂತವಾಗಿ ಆರಂಭಿಸಲಾಗುವುದು. ಈಗ ಪ್ರಾಯೋಗಿಕವಾಗಿ ಬೆಂಗಳೂರು ನಗರ ಜಿಲ್ಲೆಯಲ್ಲಿ 250 ಹಾಗೂ ರಾಜ್ಯಾದ್ಯಂತ 500 ಮಾಂಟೆಸ್ಸೆರಿಗಳನ್ನು ತೆರೆಯಲಾಗುವುದು. ಇದರಿಂದ ಪುಟಾಣಿಗಳು ಇನ್ನು ಮುಂದೆ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯಬಹುದಾಗಿದೆ ಎಂದು ಹೇಳಿದರು.

ಮಾಂಟೆಸ್ಸರಿಗಳಲ್ಲೇ ಟಿಸಿ ನೀಡಿಕೆ: ಇಲ್ಲಿ ಕಲಿಯುವ ಮಕ್ಕಳಿಗೆ ಸರ್ಕಾರದಿಂದಲೇ ಒಂದು ಜೊತೆ ಸಮವಸ, ಒಂದು ಬ್ಯಾಗ್ ಮತ್ತು ಪೆನ್ಸಿಲ್ ಬಾಕ್ಸ್ ನೀಡಲಾಗುವುದು. ಮಕ್ಕಳ ಶೈಕ್ಷಣಿಕ ಮುನ್ನಡೆಗೆ ಪೂರಕವಾಗಿ ಈ ಕೇಂದ್ರಗಳಲ್ಲೇ ಟಿಸಿ ನೀಡಲಾಗುವುದು. ಜೊತೆಗೆ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರುವ ಹಾಗೂ ಈಗಾಗಲೇ ಅಗತ್ಯ ತರಬೇತಿ ಪಡೆದಿರುವ ಅಂಗನವಾಡಿ ಕಾರ್ಯಕರ್ತೆಯರನ್ನು ಮಾತ್ರ ಬೋಧನೆಗೆ ಗುರುತಿಸಲಾಗಿದೆ ಎಂದು ತಿಳಿಸಿದರು.

ಗುಣಮಟ್ಟದ ಶಿಕ್ಷಣ ಮತ್ತು ಪೌಷ್ಠಿಕ ಆಹಾರ: ಕಳೆದ 49 ವರ್ಷಗಳಿಂದ ಚಾಲ್ತಿಯಲ್ಲಿದ್ದ ಅಂಗನವಾಡಿ ಹೆಸರು ಬದಲಾಯಿಸಿ, ಸರ್ಕಾರಿ ಮಾಂಟೆಸ್ಸೆರಿ ಹಾಗೂ ಪೂರ್ವ ಪ್ರಾಥಮಿಕ ತರಗತಿ ಆರಂಭಿಸಲಾಗಿದೆ. ಬಡ ಹಾಗೂ ಮಧ್ಯಮ ವರ್ಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಖಾಸಗಿಯಲ್ಲಿ ದುಬಾರಿ ಶುಲ್ಕಕ್ಕೆ ಕಾಡಿವಾಣ ಬೀಳಲಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಪೌಷ್ಠಿಕ ಆಹಾರ ದೊರೆಯಲಿದೆ. ಮುಂದಿನ ದಿನಗಳಲ್ಲಿ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಇನ್ನಷ್ಟು ಉತ್ತಮ ಯೋಜನೆಗಳನ್ನು ನೀಡಲಾಗುವುದು ಎಂದ ಅವರು, ಇದೇ ವೇಳೆ ಈ ಮಕ್ಕಳಿಗೆ ಆಹಾರ ಪೂರೈಕೆಯಲ್ಲಿ ಗುಣಮಟ್ಟದ ಕಾಯ್ದುಕೊಳ್ಳದಿದ್ದರೆ ಕಳಪೆ ಆಹಾರ ಒದಗಿಸಿದಲ್ಲಿ ಸಂಬಂಧಪಟ್ಟ ಡಿಡಿ ಹಾಗೂ ಸಿಡಿಪಿಒಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.

ಕಾರ್ಯಕರ್ತೆಯರಿಗೆ ಸಲಹೆ: ರಾಜ್ಯದಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಶಿಕ್ಷಣ ಇಲಾಖೆಯಿಂದ ಆರಂಭಿಸುವ ಯೋಜನೆ ಇತ್ತು. ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿದ ಅಂಗನವಾಡಿ ಕಾರ್ಯಕರ್ತೆಯರು ಹೋರಾಟ ನಡೆಸಿದ್ದರು. ಶಿಕ್ಷಣ ಇಲಾಖೆ ಎಲ್ ಕೆಜಿ, ಯುಕೆಜಿ ಆರಂಭಿಸಿದರೆ ಅಂಗನವಾಡಿಯಿಂದ ಮಕ್ಕಳು ದೂರವಾಗುತ್ತಾರೆ. ಹಾಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದಲೇ ಆರಂಭಿಸಬೇಕು ಎಂದು ಒತ್ತಾಯಿಸಿದ್ದರು. ಕಾರ್ಯಕರ್ತೆಯರ ಒತ್ತಡಕ್ಕೆ ಮಣಿದು ಅಂಗನವಾಡಿಯಲ್ಲೇ ಮಾಂಟೆಸ್ಸೆರಿ, ಎಲ್‌ಕೆಜಿ ಹಾಗೂ ಯುಕೆಜಿ ಪ್ರಾರಂಭಿಸಲಾಗಿದೆ. ಇದಕ್ಕೆ ಪೂರಕವಾಗಿ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಕೌಶಲ್ಯ ಹೆಚ್ಚಿಸಿಕೊಂಡು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಜ್ಜಾಗಬೇಕು ಎಂದು ಸಲಹೆ ನೀಡಿದರು.

ಈ ವೇಳೆ ಶಾಸಕ ಎಂ.ಕೃಷ್ಣಪ್ಪ, ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ.ಜಿ.ಸಿ.ಪ್ರಕಾಶ್, ನಿರ್ದೇಶಕ ಎನ್. ಸಿದ್ದೇಶ್ವರ್, ವಿಕಲಾಂಗ ಇಲಾಖೆ ಆಯುಕ್ತ ದಾಸ್ ಸೂರ್ಯವಂಶಿ, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಬಿ.ಎಚ್. ನಿಶ್ಚಲ್ ಇತರರು ಇದ್ದರು.

ಬಾಕ್ಸ್

ಅಂಗನವಾಡಿ ಹುಟ್ಟು ಹಾಕಿದ್ದೆ ಇಂದಿರಾ

ಕರ್ನಾಟಕದಲ್ಲಿ 49 ವರ್ಷಗಳ ಹಿಂದೆ (1975ರಲ್ಲಿ) ಆಗಿನ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಅವರು ಮೊದಲ ಬಾರಿಗೆ ಅಂಗನವಾಡಿ ಹುಟ್ಟು ಹಾಕಿದರು. ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ಮೊದಲ ಅಂಗನವಾಡಿ ಕೇಂದ್ರ ಆರಂಭಗೊಂಡು,ಆಗ ರಾಜ್ಯಾದ್ಯಂತು ನೂರು ಕೇಂದ್ರಗಳನ್ನು ತೆರೆಯಲಾಯಿತು. ಈಗ ರಾಜ್ಯಾದ್ಯಂತ 70 ಸಾವಿರ ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಅದೇ ರೀತಿ ಈಗ ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ, ಮಾಂಟೆಸ್ಸೆರಿ ಹಾಗೂ ಪೂರ್ವ ಪ್ರಾಥಮಿಕ ಶಾಲೆ ಆರಂಭವಾಗುತ್ತಿರುವುದು ರಾಜ್ಯದ ಹೆಗ್ಗಳಿಕೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.