ಜಿಲ್ಲೆ

ರಾಜ್ಯದಲ್ಲಿ ಮುಂಗಾರು ದುರ್ಬಲ: ಒಂದು ವಾರ ಮಳೆ ಕ್ಷೀಣ

ಹರೀಶ್​​ ಕೆ.ಸಿ.

ಬೆಂಗಳೂರು: ವಾಡಿಕೆಗಿಂತ ಮುನ್ನ ಪ್ರವೇಶಿಸಿ ರಾಜ್ಯಾದ್ಯಂತ ರೌದ್ರವತಾರ ತೋರಿದ್ದ ಮುಂಗಾರು (ನೈಋತ್ಯ ಮಾನ್ಸೂನ್​) ಸದ್ಯ ದುರ್ಬಲವಾಗಿದೆ.

ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನ, ಬೆಂಗಳೂರು ನಗರ, ಬೆಂ. ಗ್ರಾಮಾಂತರ ಸೇರಿ ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ವ್ಯಾಪ್ತಿಯ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆ ಕ್ಷೀಣವಾಗಲಿದೆ. ಈ ಅವಧಿಯಲ್ಲಿ ಕೆಲವೆಡೆ ಮಾತ್ರ ಸಾಧಾರಣ ಪ್ರಮಾಣದಲ್ಲಿ ಮಳೆ ಸುರಿಯಬಹುದು ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.

ಮಳೆ ಬಿಡುವು ಕೊಟ್ಟಿರುವ ಪರಿಣಾಮ ರೈತರಿಗೆ ತುಸು ನೆಮ್ಮದಿ ತಂದಿದೆ. ಕೃಷಿ ಚಟುವಟಿಕೆಗಳು ಇನ್ನಷ್ಟು ಬಿರುಸುಗೊಂಡಿವೆ. ಜಮೀನನ್ನು ಈಗಾಗಲೇ ಹಸನಗೊಳಿಸಿ ಬೀಜ ಬಿತ್ತನೆಯಲ್ಲಿ ರೈತರು ತೊಡಗಿದ್ದಾರೆ.

ಮಾರುತಗಳು ಪ್ರವೇಶಿಸುವ ವೇಳೆ ಸಾಕಷ್ಟು ಪ್ರಮಾಣದಲ್ಲಿ ತೇವಾಂಶ ಭರಿತ ಮೋಡಗಳಿದ್ದವು. ಕೇರಳ, ಕರ್ನಾಟಕ ಮತ್ತು ತಮಿಳುನಾಡು ಸೇರಿ ದಕ್ಷಿಣ ಭಾರತದಲ್ಲಿದ್ದ ಮಾನ್ಸೂನ್​, ಇದೀಗ ಈಶಾನ್ಯ ಭಾಗಕ್ಕೆ ವ್ಯಾಪಿಸಿದೆ. ಅರಬ್ಬಿಸಮುದ್ರ, ಬಂಗಾಳಕೊಲ್ಲಿ, ಅಂಡಮಾನ್​ ಮತ್ತು ನಿಕೋಬಾರ್​ನಲ್ಲಿ ಮಾನ್ಸೂನ್​ ಬಲಗೊಳ್ಳುವುದಕ್ಕೆ ಪೂರಕ ವಾತಾವರಣ ಉಂಟಾಗಿಲ್ಲ. ಈ ಎಲ್ಲ ಕಾರಣಗಳಿಂದ ಮುಂಗಾರು ದುರ್ಬಲಗೊಂಡಿದೆ. ಜೂ 8ರ ಬಳಿಕ ಮಾನ್ಸೂನ್​ ಬಲಗೊಳ್ಳಲಿದ್ದು, ರಾಜ್ಯದಲ್ಲಿ ಮತ್ತೆ ಮಳೆ ಆರಂಭವಾಗಲಿದೆ ಎಂದು ಹಿರಿಯ ಹವಾಮಾನ ತಜ್ಞ ಡಾ.ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.