ಜಿಲ್ಲೆ

ಬೇಸಾಯ ಕ್ರಮದಲ್ಲಿ ವ್ಯತ್ಯಯ

ಧನಂಜಯ ಎಸ್.ಹಕಾರಿ.

ವಿಜಯವಾಣಿ ವಿಶೇಷ ಚಳ್ಳಕೆರೆ
ತಾಲೂಕಿನಲ್ಲಿ ಮುಂಗಾರು ಮಳೆ ಕುಂಠಿತದಿಂದ ಬೇಸಾಯ ಕ್ರಮಗಳು ಸರಿಯಾಗಿ ನಡೆದಿಲ್ಲ.

ಜನವರಿಯಿಂದ ಏಪ್ರಿಲ್ ಮತ್ತು ಮೇ ತಿಂಗಳವರೆಗೆ ವಾಡಿಕೆ ಮಳೆಗಿಂತಲೂ ಕಡಿಮೆ ಬಂದಿರುವ ಕಾರಣ, ಉಳುಮೆ ಮತ್ತು ಬಿತ್ತನೆ ಪೂರ್ವ ಸಿದ್ಧತೆ ಸಂಪೂರ್ಣ ವಿಫಲವಾಗಿದೆ.

ಇದರಿಂದ ವಾರ್ಷಿಕ ಶೇಂಗಾ ಬಿತ್ತನೆ ಗುರಿ ಸಕಾಲಕ್ಕೆ ಸರಿಯಾಗಿಲ್ಲ. ಜುಲೈ ತಿಂಗಳಲ್ಲಿ 62 ಮಿಮೀ ಮಳೆ ಆಗಿರುವ ಹಿನ್ನೆಲೆಯಲ್ಲಿ ಬೇಸಾಯ ಚಟುವಟಿಕೆ ಮತ್ತು ಬಿತ್ತನೆ ಕಾರ್ಯ ಇತ್ತೀಚೆಗಷ್ಟೇ ಗರಿಗೆದರಿದೆ.

78,225 ಹೆಕ್ಟೇರ್ ಶೇಂಗಾ, ಇತರ ಬೆಳೆಗಳ ಬಿತ್ತನೆ ಗುರಿ 94,665 ಹೆಕ್ಟೇರ್ ಆಗಬೇಕಿದೆ.

ಆದರೆ, ಇದುವರೆಗೂ 74,052 ಆಗಿದ್ದು, ಇದರಲ್ಲಿ ಹೆಚ್ಚಾಗಿ ತಳಕು ಹೋಬಳಿ ವ್ಯಾಪ್ತಿಯಲ್ಲಿ 19,580 ಹೆಕ್ಟೇರ್, ಪರಶುರಾಂಪುರ

17,650, ಕಸಬಾ ವ್ಯಾಪ್ತಿ 12,950, ನಾಯಕನಹಟ್ಟಿ ಭಾಗದಲ್ಲಿ 12,110 ಹೆಕ್ಟೇರ್ ಬಿತ್ತನೆ ಆಗಿದೆ.

ಸಕಾಲಕ್ಕೆ ಬಾರದ ಮಳೆಯಿಂದ ಶೇಂಗಾ ಬಿತ್ತನೆಗೆ ವ್ಯತ್ಯಯವಾಗಿದೆ. ಇತ್ತೀಚೆಗಷ್ಟೇ ಬಿತ್ತಿದ ಬೀಜಕ್ಕೆ ಐದಾರು ದಿನಗಳಿಂದ ಜಡಿ ಮಳೆ ಹಿಡಿದ ಕಾರಣ, ಅತಿ ತೇವಾಂಶವಾಗಿ ಕೆಲ ಜಮೀನುಗಳಲ್ಲಿ ಹುಟ್ಟುವಳಿ ಕುಂಠಿತವಾಗಿದೆ.

ಇನ್ನೂ ಕೆಲ ಭಾಗದಲ್ಲಿ ಎಡೆ ಹೊಡೆದುಕೊಂಡು ಕಳೆ ಹಸನು ಮಾಡಿಕೊಳ್ಳಲು ಅನುಕೂಲವಾಗದೆ ಶೇಂಗಾ ಗಿಡಗಳಿಗಿಂತ ಕಳೆ ಹೆಚ್ಚಾಗಿ ಬೆಳೆದಿದೆ.

30 ವರ್ಷಗಳ ಹಿಂದಿನ ರೀತಿಯಲ್ಲಿ ಶೇಂಗಾ ಬೆಳೆ ಬೆಳೆಯುವುದು ಸಾಧ್ಯವಿಲ್ಲ. ಒಂದು ಚೀಲ ಬೀಜಕ್ಕೆ 30 ರಿಂದ 35 ಚೀಲ ಶೇಂಗಾ ಬೆಳೆಯಲಾಗುತ್ತಿತ್ತು.

ಪ್ರಸ್ತುತ ಐದಾರು ಚೀಲ ಬೀಜ ಹಾಕಿದರೂ, ಅತಿವೃಷ್ಟಿ, ಅನಾವೃಷ್ಟಿಯಿಂದ 20 ಚೀಲ ಶೇಂಗಾ ಬೆಳೆಯಲು ಸಾಧ್ಯವಾಗುತ್ತಿಲ್ಲ ಎನ್ನುವುದು ರೈತರ ಅಭಿಪ್ರಾಯ.

ಜುಲೈ ಮತ್ತು ಆಗಸ್ಟ್‌ನಲ್ಲಿ ವಾಡಿಕೆ ಮಳೆಗಿಂತ ಹೆಚ್ಚು ಮಳೆ ಬಂದಿದೆ ಎನ್ನುವ ವರದಿಯನ್ನು ಸರ್ಕಾರಕ್ಕೆ ಕಳುಹಿಸುವ ಮೊದಲು ಕೃಷಿ ಇಲಾಖೆ ವಾರ್ಷಿಕ ಶೇಂಗಾ ಬೆಳೆಯ ಪರಿಸ್ಥಿತಿ ಅವಲೋಕನ ಮಾಡಬೇಕಿದೆ. ಈ ವರ್ಷ ಬೆಳೆವಿಮೆ ಮತ್ತು ಬೆಳೆ ಪರಿಹಾರದ ಜತೆಗೆ ತಾಲೂಕನ್ನು ಬರಪೀಡಿತ ಎಂದು ಘೋಷಿಸಬೇಕಿದೆ.ಕೆ.ಪಿ.ಭೂತಯ್ಯ, ರಾಜ್ಯ ರೈತ ಸಂಘ ಉಪಾಧ್ಯಕ್ಷ