ಜಿಲ್ಲೆ

ಕರಾವಳಿಯಲ್ಲಿ ಮುಂಗಾರು ಮಳೆ ಕ್ಷೀಣ

ಮಂಗಳೂರು: ಕರಾವಳಿಯಲ್ಲಿ ಮುಂಗಾರು ಮಳೆ ಕ್ಷೀಣಿಸುತ್ತಿದ್ದು, ಭಾನುವಾರ ಕೂಡ ನಿರೀಕ್ಷಿತ ಮಳೆಯಾಗಿಲ್ಲ. ಜೂ.17ರಿಂದ 19ರ ವರೆಗೆ ಕರಾವಳಿಯಲ್ಲಿ ಸಾಧಾರಣ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆ ಇದೆ. ಜೂ.22ರ ನಂತರ ಭಾರಿ ಮಳೆಯ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.

ದ.ಕ.ಜಿಲ್ಲೆಯಲ್ಲಿ ಭಾನುವಾರ ಬಿಸಿಲು ಕಂಡುಬಂದಿದೆ. ಸಂಜೆ ವೇಳೆಗೆ ಮೋಡ ಕಾಣಿಸಿದ್ದು, ಹಗಲು ಗ್ರಾಮೀಣ ಭಾಗಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗಿದೆ. ಸೋಮವಾರ ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅಲ್ಲಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉತ್ತರ ಕನ್ನಡ - ಗೋವಾ ಗಡಿಭಾಗಗಳಲ್ಲಿ ಮಳೆಯ ಮುನ್ಸೂಚನೆ ಇದೆ.

ದ.ಕ.ಜಿಲ್ಲೆಯಲ್ಲಿ ಭಾನುವಾರ ದಿನಪೂರ್ತಿ ಮೋಡ ಕವಿದ ವಾತಾವರಣ ಇದ್ದು, ತಂಪಾದ ವಾತಾವರಣ ಕಂಡುಬಂದಿದೆ. ಮಧ್ಯಾಹ್ನ ಮಂಗಳೂರು ಸೇರಿದಂತೆ ಗ್ರಾಮೀಣ ಭಾಗದ ಅಲ್ಲಲ್ಲಿ ಸಣ್ಣ ಮಳೆಯಾಗಿದೆ. ಇಡೀ ದಿನ ಮಿಶ್ರವಾತಾವರಣ ಕಂಡುಬಂದಿದ್ದು, ಸಂಜೆಯೂ ಇದೇ ವಾತಾವರಣ ಮುಂದುವರಿದಿತ್ತು. ಅರಬ್ಬಿ ಸಮುದ್ರದಲ್ಲಿ ಗಾಳಿ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇದ್ದು, ಮುಂದಿನ 48 ಗಂಟೆಗಳಲ್ಲಿ ಕರ್ನಾಟಕ ಮತ್ತು ಗೋವಾಗಳಲ್ಲಿ ಹೆಚ್ಚಿನ ಗಾಳಿಯ ಮುನ್ಸೂಚನೆ ನೀಡಲಾಗಿದೆ. ಗಾಳಿ ಮಳೆಯ ಪರಿಚಲಯನೆ ಕೇರಳದ ಕೆಳ ಮತ್ತು ಮಧ್ಯಮ ಉಷ್ಣ ವಲಯದ ಮಟ್ಟದಲ್ಲಿದೆ. ಅದರ ಪ್ರಭಾವ ಮುಂದಿನ 3-4 ದಿನ ಗುಡುಗು, ಮಿಂಚು ಮತ್ತು ಗಾಳಿ ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ದಕ್ಷಿಣ ಒಳನಾಡಿನಲ್ಲೂ ಮಳೆಯಾಗಲಿದೆ. ಈಗಾಗಲೇ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

*ವಾಯುಭಾರ ಕುಸಿತ

ದ.ಕ.ಜಿಲ್ಲೆಯಲ್ಲಿ ಬಾನುವಾರ ಬೆಳಗ್ಗಿನ ವರೆಗೆ ಮಂಗಳೂರು ಹಾಗೂ ಉಳ್ಳಾಲದಲ್ಲಿ ತಲಾ 13.8 ಮಿಲಿ ಮೀಟರ್ ಗರಿಷ್ಠ ಮಳೆ ದಾಖಲಾಗಿದೆ. ಬೆಳ್ತಂಗಡಿ 12.8 ಮಿ.ಮೀ, ಬಂಟ್ವಾಳ 11.5 ಮಿ.ಮೀ, ಪುತ್ತೂರು 12.8 ಮಿ.ಮೀ, ಸುಳ್ಯ 13.4 ಮಿ.ಮೀ, ಮೂಡುಬಿದಿರೆ 11.2 ಮಿ.ಮೀ, ಕಡಬ 11.7 ಮಿ.ಮೀ, ಮೂಲ್ಕಿ 8.1 ಮಿ.ಮೀ. ಹಾಗೂ ಉಳ್ಳಾಲ 10.8 ಮಿ.ಮೀ. ಮಳೆಯಾಗಿದ್ದು, ದಿನದ ಸರಾಸರಿ ಮಳೆ 12.9 ಮಿ.ಮೀ. ದಾಖಲಾಗಿದೆ. ಈಗಿನಂತೆ ಕರಾವಳಿ ಸೇರಿದಂತೆ ರಾಜ್ಯದಾದ್ಯಂತ ಜೂನ್ 21ರ ತನಕವೂ ಅಲ್ಲಲ್ಲಿ ಒಂದೆರಡು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಜೂನ್ 22ರಿಂದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚೆನೆ ಇದೆ. ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆಯ ಸಾಧ್ಯತೆ ಇದೆ. ಆಗ್ನೇಯ ಮಡಗಾಸ್ಕರ್ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದರಿಂದ ಮುಂಗಾರಿಗೆ ಸ್ವಲ್ಪ ಹಿನ್ನಡೆ ಸಾಧ್ಯತೆ ಇದೆ.