ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಮುಂಗಾರು ಆಶಾದಾಯಕವಾಗಿದ್ದು, ಜೂನ್ನಿಂದ ಸೆಪ್ಟೆಂಬರ್ವರೆಗೆ ವಾಡಿಕೆ ಅಥವಾ ವಾಡಿಕೆಗಿಂತ ತುಸು ಹೆಚ್ಚು ಮಳೆ ಬೀಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಈಗಾಗಲೇ ಭವಿಷ್ಯ ಹೇಳಿದೆ.
ಫೆಸಿಫಿಕ್ ಸಮುದ್ರದ ಪೂರ್ವ ಭಾಗದಲ್ಲಿ ಸಮುದ್ರ ನೀರಿನ ಉಷ್ಣಾಂಶ ವಾಡಿಕೆಗಿಂತ 1 ಡಿಗ್ರಿ ಸೆಲ್ಸಿಯಸ್ನಿಂದ 1.5 ಡಿಗ್ರಿ ಸೆಲ್ಸಿಯಸ್ವರೆಗೆ ಹೆಚ್ಚು ದಾಖಲಾದರೆ "ಎಲ್ ನಿನೋ' ಉಂಟಾಗುತ್ತದೆ. ಫೆಸಿಫಿಕ್ ಸಮುದ್ರದ ಪಶ್ಚಿಮ ಭಾಗದಲ್ಲಿ ಸಮುದ್ರ ನೀರಿನ ಉಷ್ಣಾಂಶ ವಾಡಿಕೆಗಿಂತ ಹೆಚ್ಚು ಇದ್ದರೆ "ಲಾ-ನಿನಾ' ಎಂದು ಕರೆಯಲಾಗುತ್ತಿದೆ. ಎಲ್ ನಿನೋ ಮತ್ತು ಲಾ-ನಿನಾ ಪರಿಸ್ಥಿತಿ ಮೇರೆಗೆ ಮಳೆ ಮೇಲೆ ಪರಿಣಾಮ ಬೀರುತ್ತದೆ. ಕಳೆದ ವರ್ಷ ಎಲ್ ನಿನೋ ಪ್ರಭಾವದಿಂದಾಗಿ ಮುಂಗಾರಿನ ಮೇಲೆ ಸಾಕಷ್ಟು ಪರಿಣಾಮ ಬೀರಿತ್ತು. ಇದರಿಂದಾಗಿ ರಾಜ್ಯದಲ್ಲಿ ತೀವ್ರ ಮಳೆ ಕುಂಠಿತವಾಗಿ ಬರಗಾಲ ಉಂಟಾಗಿತ್ತು. ಜಾಗತಿಕ ನಿಯಂತ್ರಕ ಸೂಚ್ಯಂಕ ಪ್ರಕಾರ ಕಳೆದ ಫೆಬ್ರವರಿಯಿಂದ ದುರ್ಬಲಗೊಂಡು ಮಧ್ಯಮ ಹಂತಕ್ಕೆ ಬಂದಿರುವ "ಎಲ್ ನಿನೋ' ಜೂನ್ ಅಥವಾ ಜುಲೈನಲ್ಲಿ ಶೂನ್ಯ ಹಂತಕ್ಕೆ ಬರಲಿದೆ. ನಂತರ, "ಲಾ-ನಿನಾ' ಬರಲಿದೆ. ಇದರಿಂದಾಗಿ ಈ ಬಾರಿ ಮುಂಗಾರಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿಯುವ ಸಾಧ್ಯತೆ ಇದೆ.
ವಾಡಿಕೆಯಂತೆ ಮೇ 19ಕ್ಕೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಿಂದ ನೈಋತ್ಯ ಮಾನ್ಸೂನ್( ಮುಂಗಾರು ಮಳೆ) ಆರಂಭವಾಗುವ ಸಾಧ್ಯತೆ ಇದೆ. ಈ ವೇಳೆ ಮಾರುತಗಳು ಪ್ರಬಲವಾದರೆ ತಿಂಗಳಾಂತ್ಯಕ್ಕೆ ಕೇರಳಕ್ಕೆ ಪ್ರವೇಶಿಸಲಿವೆ. ಕೇರಳಕ್ಕೆ ಬಂದಿರುವ ಮಾರುತಗಳು ಪ್ರಬಲವಾದರೆ ಅದೇ ದಿನ ಅಥವಾ ಒಂದೆರೆಡು ದಿನದಲ್ಲಿ ಕರ್ನಾಟಕಕ್ಕೆ ಆಗಮಿಸಲಿದೆ ಎಂದು ಹವಾಮಾನ ತಜ್ಞ ಡಾ. ಶ್ರೀನಿವಾಸರೆಡ್ಡಿ ಹೇಳಿದ್ದಾರೆ.