ಗೋಣಿಕೊಪ್ಪ : ಗೋಣಿಕೊಪ್ಪದ ಕ್ಯಾಲ್ಸ್ ವಿದ್ಯಾಸಂಸ್ಥೆಯಲ್ಲಿ 3ನೇ ಆವೃತ್ತಿಯ ಮಾನ್ಸೂನ್ ಹಾಫ್ ಮ್ಯಾರಥಾನ್ ಜರುಗಿತು.
ಇದು ಮೂರನೇ ಆವೃತ್ತಿ ಈ ಬಾರಿ ನಡೆದಿದ್ದು ನಿರೀಕ್ಷೆಗೂ ಮೀರಿ ಸ್ಪರ್ಧಾಳುಗಳು ಆಗಮಿಸಿದ್ದರು. ಸಂಭ್ರಮ, ಸಡಗರದ ನಡುವೆ ಸ್ಪರ್ಧೆ ನಡೆದಿದ್ದು ಜನಾಕರ್ಷಣೆ ಪಡೆಯಿತು. ಬೆಳಗ್ಗೆ 6 ಗಂಟೆಗೆ ಸರಿಯಾಗಿ ಮಹಿಳೆಯರಿಗೆ ಹಾಗೂ ಪುರುಷರಿಗೆ ಏರ್ಪಡಿಸಿದ್ದ 10 ಕಿಮೀ ಮ್ಯಾರಥಾನ್‌ಗೆ ಸಂಸ್ಥೆಯ ಮಾಜಿ ಚಾಂಪಿಯನ್, ಟ್ರಸ್ಟಿ ಅಶ್ವಿನಿ ನಾಚಪ್ಪ, ದತ್ತ ಕರುಂಬಯ್ಯ ಸೇರಿದಂತೆ ಅನೇಕ ಗಣ್ಯರು ಚಾಲನೆ ನೀಡಿದರು.
ಸ್ಪರ್ಧೆಯ ಮಾರ್ಗದುದ್ದಕ್ಕೂ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ರಸ್ತೆಯಲ್ಲಿ ಸಂಚರಿಸುವ ಯಾವುದೇ ವಾಹನಗಳಿಂದ ಸ್ಪರ್ಧಿಗಳಿಗೆ ಆಡಚಣೆಯಾಗದಂತೆ ಎಚ್ಚರ ವಹಿಸಿದ್ದರು. ನಂತರ ಯುವಕ, ಯುವತಿ ಹಾಗೂ ಮಕ್ಕಳಿಗಾಗಿ ಮ್ಯಾರಥಾನ್ 2 ನೇ ಹಾಗೂ ಮೂರನೇ ಸುತ್ತಿನಲ್ಲಿ ಸ್ಪರ್ಧೆ ಆರಂಭಿಸಲಾಯಿತು. ಕೊಡಗು ಸೇರಿದಂತೆ ಮೈಸೂರು, ಮಂಗಳೂರು, ಬೆಂಗಳೂರು ಪಾಂಡಿಬೇರಿ, ಕೋಲ್ಕತ, ತಮಿಳುನಾಡಿನಿಂದ ಸ್ಪರ್ಧಿಗಳು ಆಗಮಿಸಿದ್ದರು.
ಅಂತಾರಾಷ್ಟ್ರೀಯ ಓಟಗಾರ್ತಿ, ಕ್ಯಾಲ್ಸ್ ಸಂಸ್ಥೆಯ ನಿರ್ದೇಶಕಿ ಅಶ್ವಿನಿ ನಾಚಪ್ಪ ಮಾತನಾಡಿ, ಕಳೆದ 2 ವರ್ಷಗಳಿಗಿಂತ ಈ ಬಾರಿ ಹೆಚ್ಚು ಓಟಗಾರರು ಭಾಗವಹಿಸಿದ್ದು ಸಂತಸ ತಂದಿದೆ. ವಯಸ್ಸಿನ ಯಾವುದೇ ಭೇದಭಾವ ಇಲ್ಲದೆ ದೈಹಿಕ ಸಾಮರ್ಥ್ಯವನ್ನು ಎಲ್ಲರೂ ಕಾಪಾಡಿಕೊಳ್ಳುತ್ತಿರುವುದು ಶ್ಲಾಘನೀಯ. ಕ್ರೀಡೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ದೇಶದ ವಿವಿಧ ಭಾಗದಿಂದ ಸ್ಪರ್ಧಿಗಳು ಭಾಗವಹಿಸಿದ್ದಾರೆ. 3000 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಗಳು ಭಾಗವಹಿಸಿರುವುದು ಹೆಮ್ಮೆ ಎಂದರು.
ಭಾಗವಹಿಸಿದ್ದ ಎಲ್ಲ ಸ್ಪರ್ಧಿಗಳಿಗೆ ಪಾರಿತೋಷಕ ನೀಡಲಾಯಿತು. ವಿವಿಧ ಹಂತದಲ್ಲಿ ಭಾಗವಹಿಸಿ ಜಯ ಗಳಿಸಿದ ಸ್ಪರ್ಧಿಗಳಿಗೆ ನಗದು ಬಹುಮಾನ ಹಾಗೂ ನೆನಪಿನ ಕಾಣಿಕೆ ನೀಡಲಾಯಿತು. ಎನ್‌ಇಎನ್ ಸಂಸ್ಥೆ, ಫೆಡರಲ್ ಬ್ಯಾಂಕ್, ಟಾಟಾ ಕಾಫಿ ಹಾಗೂ ಲೋಪಮುದ್ರಾ ಆಸ್ಪತ್ರೆ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಾಜಿ ಹೆಪ್ಲಥಾನ್ ಸ್ಪರ್ಧಿ ಹಾಗೂ ಅರ್ಜುನ ಪ್ರಶಸ್ತಿ ವಿಜೇತೆ ರೀತ್ ದೇವಯ್ಯ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು.
ಟಾಟಾ ಕಾಫಿ ಸಂಪತ್, ಲೋಪಮುದ್ರಾ ಆಸ್ಪತ್ರೆಯ ಡಾ. ಅಮೃತ್ ನಾಣಯ್ಯ, ಕಾಪ್ಸ್ ಸಂಸ್ಥೆಯ ಚೇರ್ಮನ್ ದತ್ತ ಕರುಂಬಯ್ಯ, ಪ್ರಾಂಶುಪಾಲೆ ಗೌರಮ್ಮ, ಹಾಕಿ ವೀಕ್ಷಕ ವಿವರಣೆಗಾರ ಚೆಪ್ಪುಡಿರ ಕಾರ್ಯಪ್ಪ, ಭಾರತೀಯ ರೈಲ್ವೆ ಸೀನಿಯರ್ ಡಿವಿಜನಲ್ ಫೈನಾನ್ಸ್ ಮ್ಯಾನೇಜರ್ ಶ್ರೇಯಸ್ ಜಿ. ಹೊಸೂರು, ಭಾರತ ಕ್ರೀಡಾ ಇಲಾಖೆಯ ಮಾಜಿ ಕಾರ್ಯದರ್ಶಿ ಬಿ.ಎ.ಪಿ. ರಾವ್, ಫೆಡರಲ್ ಬ್ಯಾಂಕ್‌ನ ಉಪಾಧ್ಯಕ್ಷ ಹಾಗೂ ವಿಭಾಗೀಯ ಮುಖ್ಯಸ್ಥ ರಾಜೀವ್, ಸಹಾಯಕ ಉಪಾಧ್ಯಕ್ಷೆ ಹಾಗೂ ವಿಭಾಗೀಯ ಮುಖ್ಯಸ್ಥ ಆರ್.ಎಸ್.ಲಕ್ಷ್ಮೀಪ್ರಿಯಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ವಿಜೇತರು: ಮ್ಯಾರಥಾನ್ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಮೈಸೂರಿನ ಪುರುಷೋತ್ತಮ್(ಪ), ರಘುವರನ್(ದ್ವಿ), ಅನಂತ್ (ತೃ) ಸ್ಥಾನ ಪಡೆದರು. 10 ಕಿಮೀ ಸ್ಪರ್ಧೆಯಲ್ಲಿ ನಿತಿನ್(ಪ್ರ), ಪ್ರತಾಪ್(ದ್ವಿ), ಮಲ್ಲಿಕಾರ್ಜನ್(ತೃ) ಸ್ಥಾನ ಪಡೆದರು. ಮಹಿಳೆಯರ ವಿಭಾಗದಲ್ಲಿ ಹಾಫ್ ಮ್ಯಾರಥಾನ್ ಸ್ಪರ್ಧೆಯಲ್ಲಿ ಬಿಜೆಯ ಬರ್ಮನ್(ಪ್ರ), ಮಮತಾ(ದ್ವಿ), ರಶಿಕಾ(ತೃ) ಸ್ಥಾನ ಪಡೆದರು. 10 ಕಿ.ಮೀ ಮ್ಯಾರಥಾನ್ ಸ್ಪರ್ಧೆಯಲ್ಲಿ ಬಬ್ಲಿ ಗುರುಜ(ಪ್ರ), ಚೋಂದಮ್ಮ(ದ್ವಿ), ರಾಣಿ(ತೃ) ಸ್ಥಾನ ಪಡೆದರು.