ಹಾನಗಲ್ಲ: ಮುಂಗಾರು ಹಂಗಾಮಿನಲ್ಲಿ ಕಷ್ಟಪಟ್ಟು ಲಕ್ಷಾಂತರ ರೂ. ವೆಚ್ಚ ಮಾಡಿ ಬೆಳೆದಿದ್ದ ಫಸಲು ಹಿಂಗಾರು ಮಳೆ ಹೊಡೆತಕ್ಕೆ ನೀರು ಪಾಲಾಗಿ, ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಕಳೆದ ವರ್ಷ ಮಳೆಯಾಗದೇ ಫಸಲು ಹಾಳಾದರೆ, ಈ ವರ್ಷ ಅತಿ ಮಳೆಯಿಂದ ಬೆಳೆ ಹಾನಿಗೀಡಾಗಿದೆ.
ತಾಲೂಕಿನ ಮಾರನಬೀಡ ಗ್ರಾಮದಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಶೇಂಗಾ ಬೆಳೆ ಹೊಲದಲ್ಲಿ ಸಿಲುಕಿಕೊಂಡಿದ್ದರಿಂದ ಅಲ್ಲಿಯೇ ಮೊಳಕೆಯೊಡೆಯುತ್ತಿದೆ. ಎಕರೆಗೆ 30 ಸಾವಿರ ರೂ. ಖರ್ಚು ಮಾಡಿ ಬೆಳೆದಿದ್ದ ಶೇಂಗಾ ಸಮೃದ್ಧವಾಗಿ ಬಂದಿತ್ತು. ಎಕರೆಗೆ 10 ರಿಂದ 12 ಕ್ವಿಂಟಾಲ್ ಬರಬಹುದೆಂಬುದು ರೈತರ ನಿರೀಕ್ಷೆಯಾಗಿತ್ತು. ಸದ್ಯ ಮಾರುಕಟ್ಟೆಯಲ್ಲಿ 7ರಿಂದ 8 ಸಾವಿರ ರೂ. ದರವಿದೆ. ಬುಧವಾರ ಸುರಿದ ಮಳೆಗೆ ಲಕ್ಷಾಂತರ ರೂ. ಆದಾಯ ನೀರಿನಲ್ಲಿ ಕೊಚ್ಚಿಹೋಗಿದೆ. ಈಗಲೂ ಇಲ್ಲಿನ ಹಳ್ಳದ ನೀರು ಹರಿದು ಬರುತ್ತಿರುವುದರಿಂದ ಹೊಲಗಳಲ್ಲಿ ಬರೀ ನೀರೇ ಕಾಣುತ್ತಿದೆ.
ಮಾರನಬೀಡ ಗ್ರಾಮದಲ್ಲಿ 200 ಎಕರೆ ಮೆಕ್ಕೆಜೋಳ, 90 ಎಕರೆ ಶೇಂಗಾ, 260 ಎಕರೆ ಸೋಯಾಬೀನ್ ಬೆಳೆ ಮಳೆಯಿಂದಾಗಿ ಹಾನಿಗೀಡಾಗಿದೆ ಎಂದು ರೈತರು ಅಂದಾಜಿಸಿದ್ದಾರೆ. ಇನ್ನೊಂದು ವಾರದಲ್ಲಿ ಕಟಾವಿಗೆ ಬರಲಿದ್ದ ಮೆಕ್ಕೆಜೋಳ ಫಸಲು ಮಳೆಯಿಂದಾಗಿ ಹಾನಿಗೀಡಾಗಿದೆ. ಮೆಕ್ಕೆಜೋಳ ತೆನೆಗಳು, ಶೇಂಗಾ ಫಸಲು ಮೊಳಕೆಯೊಡೆದಿವೆ. ಸೋಯಾಬೀನ್ ಬಣವೆ ಸುತ್ತ ನೀರಿಳಿದು ದುರ್ನಾತ ಬೀರುತ್ತಿದೆ. ಅಡಕೆ ತೋಟ ಜಲಾವೃತವಾಗಿದ್ದು, ಅಡಕೆ ಮದ್ಯೆ ಬೆಳೆದಿದ್ದ ಶೇಂಗಾ ಬೆಳೆಯೂ ಕೊಳೆತಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಹಾರಕ್ಕೆ ವರದಿ ಸಲ್ಲಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಹಳ್ಳದಿಂದಾದ ಸಮಸ್ಯೆ: ಆಡೂರ ಮಜರೆ ನೀರಲಗಿ ಕೆರೆಯಿಂದ ಒಡಕಿನಹಳ್ಳ ಮಾರನಬೀಡ ಗ್ರಾಮದ ಮೂಲಕ ಹಾಯ್ದು ಹೋಗಿದ್ದು, ಹೂಳು ತುಂಬಿದೆ. ಇದರಿಂದಾಗಿ ಗ್ರಾಮದ ಬಹುತೇಕ ಪ್ರದೇಶಗಳಲ್ಲಿ ಅವಾಂತರ ಸೃಷ್ಟಿಸಿ ಫಸಲು ಹಾನಿಗೆ ಕಾರಣವಾಗುತ್ತಿದೆ. ಈ ಹಳ್ಳದಿಂದಾಗಿ ಅಚ್ಚುಕಟ್ಟು ಪ್ರದೇಶದ ರೈತರು ಪ್ರತಿ ವರ್ಷವೂ ಸಮಸ್ಯೆ ಎದುರಿಸುವಂತಾಗಿದೆ. ಹಳ್ಳದಲ್ಲಿ ನೀರಿಳಿಯುವವರೆಗೆ ಹೊಲ-ಗದ್ದೆಗಳಿಗೆ ತೆರಳಲೂ ಸಾಧ್ಯವಾಗುತ್ತಿಲ್ಲ. ಹಳ್ಳದ ಪಾತ್ರದಲ್ಲಿ ಬರುವ ಹೊಲಗಳಲ್ಲಿ ಗೋವಿನಜೋಳ, ಸೋಯಾಬೀನ್, ಹತ್ತಿ ಬೆಳೆಯಲಾಗಿದೆ. ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಫಸಲು ಕೂಡ ಕೊಚ್ಚಿ ಹೋಗುತ್ತಿವೆ. ಹಳ್ಳದ ನೀರಿನಿಂದ ಹರವಿ-ಹರನಗಿರಿ ರಸ್ತೆ ಕೊರೆತ ಉಂಟಾಗಿ ವಾಹನ ಸವಾರರಿಗೆ ಸಂಕಷ್ಟ ತಂದಿಟ್ಟಿದೆ. ಹಳ್ಳ ಹೂಳೆತ್ತದಿರುವುದೇ ಈ ಅವಘಡಕ್ಕೆ ಕಾರಣ ಎಂಬುದು ಅಚ್ಚುಕಟ್ಟು ಪ್ರದೇಶದ ರೈತರ ಆರೋಪ.
ಹಾವೇರಿ ತಾಲೂಕಿಗೆ ಹೊಂದಿಕೊಂಡಿರುವ ಬೊಮ್ಮನಹಳ್ಳಿ ವ್ಯಾಪ್ತಿಯ ಮಾರನಬೀಡ, ಬೆಳವತ್ತಿ, ಕಂಚಿನೆಗಳೂರು ಸೇರಿ 11 ಗ್ರಾಮಗಳಲ್ಲಿ ಹಿಂಗಾರು ಮಳೆ ಹೆಚ್ಚಾಗಿರುವುದರಿಂದ ಈಗಾಗಲೇ ಜಿಲ್ಲಾಡಳಿತಕ್ಕೆ 113 ಹೆಕ್ಟೇರ್ ಫಸಲು ಹಾನಿಯಾಗಿರುವ ಬಗೆಗೆ ಪ್ರಾಥಮಿಕ ವರದಿ ಸಲ್ಲಿಸಲಾಗಿದೆ. | ಮಾರುತಿ ಅಂಗಾರಗಟ್ಟಿ ಎಡಿಎ ಹಾನಗಲ್ಲ