ಸಂತೋಷ ಮುರಡಿ ಮುಂಡರಗಿ
ಮುಂಗಾರು ಮಳೆ ಆರಂಭಗೊಂಡರೆ ಹಚ್ಚ ಹಸಿರಿನಿಂದ ಕಂಗೊಳಿಸುವ ಕಪ್ಪತಗುಡ್ಡ ಪರ್ವತಗಳ ಸಾಲುಗಳನ್ನು ನೋಡುವುದೇ ಕಣ್ಣಿಗೆ ಸ್ವರ್ಗ. ಇಲ್ಲಿನ ಪ್ರಕೃತಿ ಸೌಂದರ್ಯ ಸವಿದರೆ ಮನಸಿಗೆ ನೆಮ್ಮದಿ ದೊರೆಯುತ್ತದೆ.
ಉತ್ತರ ಕರ್ನಾಟಕ ಸಹ್ಯಾದ್ರಿ ಎಂದೇ ಕರೆಸಿಕೊಳ್ಳುವ ಕಪ್ಪತಗುಡ್ಡದ ಪ್ರಕೃತಿ ಸೌಂದರ್ಯವು ಪ್ರಕೃತಿ ಪ್ರಿಯರನ್ನು ತನ್ನತ್ತ ಕೈಬೀಸಿ ಕರೆಯುವ ಸುಂದರ ತಾಣ. ಇಲ್ಲಿನ ಆಯುರ್ವೇದ ಸಸ್ಯಕಾಶಿಗಳು ಗಿಡ-ಮರಗಳ ಎಲೆಗಳಿಂದ ಮುತ್ತಿನಂತೆ ನೆಲಕ್ಕೆ ಬೀಳುವ ಮಂಜಿನ ಹನಿಗಳನ್ನು ಕಣ್ತುಂಬಿಕೊಳ್ಳುವುದೇ ಸೊಬಗು.
ಸಂರಕ್ಷಿತ ಮತ್ತು ವನ್ಯಜೀವಿಧಾಮ ಕಪ್ಪತಗುಡ್ಡ ಅರಣ್ಯ ಪ್ರದೇಶದಲ್ಲಿ ಆಗಾಗ ಮಳೆ ಮತ್ತು ಮೋಡ ಕವಿದ ವಾತಾವರಣ ಇರುವುದರಿಂದ ಹೆಚ್ಚು ಪ್ರಮಾಣದಲ್ಲಿ ಇಬ್ಬನಿ ಬೀಳುತ್ತಿದೆ. ಕಪ್ಪತಗುಡ್ಡ ಸಾಲುಗಳು ಮಂಜಿನಿಂದ ಆವರಿಸಿಕೊಳ್ಳುವುದನ್ನು ಕಣ್ತುಂಬಿಕೊಳ್ಳಲು ಇದು ಸುಸಮಯ. ಕಪ್ಪತಗುಡ್ಡ ಈಗ ಹಸಿರು ಮುಡಿದು ಕಣ್ಮನ ಸೆಳೆಯುತ್ತಿದೆ. ದೊಡ್ಡದಾಗಿ ಮಳೆ ಸುರಿದರೆ ಅಲ್ಲಲ್ಲಿ ಗುಡ್ಡದ ಮೇಲಿಂದ ಝುಳು-ಝಳು ಎಂದು ಹರಿಯುವ ಸಣ್ಣಪುಟ್ಟ ಝರಿಗಳು ಮುದ ನೀಡುತ್ತವೆ.
33 ಸಾವಿರ ಹೆಕ್ಟೇರ್ ಪ್ರದೇಶ ವಿಸ್ತಾರದ ಕಪ್ಪತಗುಡ್ಡವು ಗದಗ ತಾಲೂಕಿನ ಬಿಂಕದಕಟ್ಟಿಯಿಂದ ಮುಂಡರಗಿ ತಾಲೂಕಿನ ಹಮ್ಮಿಗಿವರೆಗೂ ಹರಡಿಕೊಂಡಿದೆ. ಕರಿಲೆಕ್ಕಿ, ಅಶ್ವಗಂಧ, ಚದುರಂಗ, ಅಮೃತಬಳ್ಳಿ, ಸೇರಿ ಒಟ್ಟು 300ಕ್ಕೂ ಹೆಚ್ಚು ಆಯುರ್ವೇದ ಸಸ್ಯಗಳ ಆಗರವಾಗಿದೆ. ಹಲವಾರು ಪ್ರಾಣಿ, ಪಕ್ಷಿಗಳಿವೆ. ಮಳೆಗಾಲ ಶುರುವಾಗುತ್ತಿದ್ದಂತೆ ವನ್ಯಜೀವಿಗಳಲ್ಲಿ ಸಂಭ್ರಮ ಮನೆ ಮಾಡಿದ್ದು, ಅವುಗಳ ನಲಿದಾಟ ವರ್ಣರಂಜಿತವಾಗಿದೆ.