ಜಿಲ್ಲೆ

ಬಿಳಿ ಮೂತಿಯ ಮಂಗಗಳ ಹಾವಳಿ ಹೆಚ್ಚಳ

Uttara Kannada - Subash Hegde
ಶಿರಸಿ: ತಾಲೂಕಿನ ನೆಗ್ಗು ಗ್ರಾಮ ಪಂಚಾಯಿತಿ ನೇರ್ಲವಳ್ಳಿ ಹಾಗೂ ಮರ್ಲಮನೆ ಗ್ರಾಮಗಳಲ್ಲಿ ಬಿಳಿ ಮೂತಿ ಮಂಗಗಳ ಹಾವಳಿ ಹೆಚ್ಚಾಗಿದೆ. ಅಡಕೆ ತೋಟಗಳಿಗೆ ಆಗಮಿಸಿ ಇನ್ನೂ ಬೆಳೆಯದ ಮಿಳ್ಳೆಗಳನ್ನು ತಿನ್ನುತ್ತಿರುವುದು ಇಲ್ಲಿಯ ರೈತರಿಗೆ ಚಿಂತೆ ಮೂಡಿಸಿದೆ.
 ಬಿಳಿ ಮೂತಿ ಮಂಗಗಳ ಹಾವಳಿಯಿಂದಾಗಿ ರೈತರು ಪ್ರತಿ ದಿನವೂ ತೋಟವನ್ನು ಕಾಯುತ್ತಿದ್ದಾರೆ. ಆದಾಗ್ಯೂ ಬೆಳಗ್ಗೆ ನಸುಕಿನಲ್ಲಿಯೇ ಇವು ತೋಟಕ್ಕೆ ದಾಳಿ ಮಾಡುತ್ತಿವೆ. ಒಮ್ಮೆಲೇ ಹತ್ತಾರು ಮಂಗಗಳು ಅಡಕೆ ಗೊನೆಗಳ ಮೇಲೆ ಕುಳಿತು ಮಿಳ್ಳೆಗಳನ್ನು ತೆರಿದು ಕಚ್ಚಿ ಹಾಕುತ್ತಿವೆ. ಇದರಿಂದಾಗಿ ಮರಗಳ ಸಂಪೂರ್ಣವಾಗಿ ಖಾಲಿ ಆಗುತ್ತಿದೆ ಎನ್ನುತ್ತಾರೆ ಮರ್ಲಮನೆಯ ಕೃಷಿಕ ವೀಣಾ ಹೆಗಡೆ.
 ಈಗಾಗಲೇ ಅಡಕೆ ಬೆಳೆಗೆ ಕೊಳೆ ರೋಗ ಬಾಧಿಸಿದೆ. ಈ ನಡುವೆ ಬಿಳಿ ಮೂತಿ ಮಂಗಗಳ ಕಾಟದಿಂದ ವರ್ಷದ ಬೆಳೆಯೇ ಹಾಳಾಗುತ್ತಿದೆ. ಇಲ್ಲಿಯ ಮಹಾಬಲೇಶ್ವರ ಹೆಗಡೆ, ಜಿ.ಜಿ.ಹೆಗಡೆ, ಸುಬ್ರಾಯ ಹೆಗಡೆ ಸೇರಿದಂತೆ ಹಲವು ಕೃಷಿಕರ ತೋಟದಲ್ಲಿ ಮಂಗಗಳ ಹಾವಳಿ ಉಂಟಾಗಿದೆ. ಅರಣ್ಯ ಇಲಾಖೆ ಈಗಾಗಲೇ ಹಾನಿ ಅನುಭವಿಸಿದ ರೈತರಿಗೆ ಪರಿಹಾರ ನೀಡುವ ಜೊತೆ ಈ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.