ಕುರುಗೋಡು: ಟ್ರ್ಯಾಕ್ಟರ್ ಶಬ್ದ ಕಿವಿಗೆ ಬಿದ್ದರೆ ಪ್ರತ್ಯಕ್ಷವಾಗುವ ಕಪಿರಾಯ, ಅಡ್ಡಗಟ್ಟಿ ಚಾಲಕನನ್ನು ಬೆದರಿಸುತ್ತಾನೆ. ಬಳಿಕ ಪಟ್ಟು ಬಿಡದೆ ಸ್ಟೇರಿಂಗ್ ಸೀಟಿನಲ್ಲಿ ಕೂತುಕೊಳ್ಳುವ ವಾನರ ಜನರ ಆತಂಕಕ್ಕೆ ಕಾರಣವಾಗಿದ್ದಾನೆ. ಪಟ್ಟಣದ ಮುಷ್ಟಗಟ್ಟೆ, ದೊಡ್ಡಬಸವೇಶ್ವರ, ಎದುರು ಬಸವಣ್ಣ ರಸ್ತೆಯಲ್ಲಿ ವಿವಿಧ ಸಾಮಗ್ರಿ ತುಂಬಿಕೊಂಡು ನಿತ್ಯ ಹತ್ತಾರು ಟ್ರ್ಯಾಕ್ಟರ್ ಓಡಾಡುತ್ತವೆ. ಆದರೆ ಕಳೆದ ವಾರದಿಂದ ಕೋತಿಯ ಉಪಟಳ ಹೆಚ್ಚಾಗಿದೆ. ಟ್ಯಾಕ್ಟರ್ ಸಂಚರಿಸುವ ವೇಳೆ ಇದ್ದಕ್ಕಿದ್ದಂತೆ ಎರಗುವ ಕೋತಿಯಿಂದ ಚಾಲಕರು ಹೈರಾಣಾಗಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕೋತಿ ಸೆರೆ ಹಿಡಿದು ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥರಾದ ಬಸವರಾಜ, ಹುಲುಗಪ್ಪ ಇತರರು ಒತ್ತಾಯಿಸಿದ್ದಾರೆ.
ಮುಷ್ಟಗಟ್ಟೆ ರಸ್ತೆಯಲ್ಲಿ ನಿತ್ಯ ಟ್ರ್ಯಾಕ್ಟರ್ ಮೇಲೆ ಎರಗಿ ಸ್ಟೇರಿಂಗ್ ಸೀಟಿನ ಮೇಲೆ ಕೆಲ ಸಾರಿ ಗಂಟೆಗಟ್ಟಲೇ ಕೂರುತ್ತದೆ. ಬೇರೆ ಟ್ರ್ಯಾಕ್ಟರ್ ಬಂದಾಗ ಅದರ ಮೇಲೆ ಹೋಗಿ ಕೂರುತ್ತದೆ. ಇದರಿಂದ ಜನರಿಗೂ ಶಾಲಾ ಮಕ್ಕಳಿಗೂ ತೊಂದರೆಯಾಗುತ್ತಿದೆ. ಕೂಡಲೇ ಅಧಿಕಾರಿಗಳು ಕ್ರಮವಹಿಸಬೇಕು. ರಮೇಶ್ ಗ್ರಾಮಸ್ಥ ಕುರುಗೋಡು