ಜಿಲ್ಲೆ

ಬಾಲಕಿ ಮೇಲೆ ಕೋತಿ ದಾಳಿ

ಮಂಜುನಾಥ ಅಂಗಡಿ

ಧಾರವಾಡ: ಕೋತಿಯೊಂದು ಬಾಲಕಿಯ ಮೇಲೆ ದಾಳಿ ಮಾಡಿದ ಟನೆ ತಾಲೂಕಿನ ಗರಗ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಸರ್ಕಾರಿ ಉರ್ದು ಹೆಣ್ಣು ಮಕ್ಕಳ ಶಾಲೆಯ 2ನೇ ತರಗತಿಯ ವಿದ್ಯಾರ್ಥಿನಿ ಇಕ್ರಾ ಹಾಸೀಂ ಗಡಕಾರಿ (8) ಗಾಯಗೊಂಡ ಬಾಲಕಿ. ಈಕೆ ಮನೆಯಿಂದ ಶಾಲೆಗೆ ಹೊರಟಿದ್ದ ವೇಳೆ ಕೋತಿ ಬಾಲಕಿಯ ಮೇಲೆರಗಿದೆ. ಬಾಲಕಿಯ ಕೈ, ಕಾಲುಗಳಿಗೆ ತೀವ್ರ ಗಾಯಗಳಾಗಿವೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಬಾಲಕಿಯನ್ನು ಕೂಡಲೇ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿದೆ. ಪಾಲಕರು ಗರಗ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಕಳೆದೊಂದು ವಾರದಲ್ಲಿ ಈ ಕೋತಿಯು 4- 5 ಜನರಿಗೆ ಕಚ್ಚಿ ಗಾಯ ಮಾಡಿರುವ ವರದಿಯಾಗಿದೆ. ಗ್ರಾಮದಲ್ಲಿ ಕೋತಿಯ ಭಯ ಆವರಿಸಿದ್ದು, ಅರಣ್ಯ ಇಲಾಖೆಯವರು ಸೆರೆ ಹಿಡಿಯುವ ಭರವಸೆ ನೀಡಿದ್ದಾರೆ.