ಜಿಲ್ಲೆ

20ಕ್ಕೂ ಹೆಚ್ಚು ಜನರನ್ನು ಕಚ್ಚಿದ ಕೋತಿ

ರೇಷ್ಮೆ ನಗರ ಡೆಸ್ಕ್

 ಮಾಗಡಿ : ತಾಲೂಕಿನ ವೀರೇಗೌಡನದೊಡ್ಡಿ ಗ್ರಾಮದಲ್ಲಿ 12 ದಿನಗಳಿಂದ ಮಕ್ಕಳು, ಮಹಿಳೆಯರು ಸೇರಿ 20ಕ್ಕೂ ಹೆಚ್ಚು ಮಂದಿಗೆ ಕೋತಿ ಕಚ್ಚಿ ಗಾಯಗೊಳಿಸಿವೆ.
ಇದ್ದಕ್ಕಿದ್ದಂತೆ ಕೋತಿಗಳ ಗುಂಪು ಪ್ರತ್ಯಕ್ಷವಾಗಿದ್ದು, ಮನೆ ಬಳಿ ರಾಗಿ, ಅಕ್ಕಿ, ಗೋಧಿ ಪದಾರ್ಥಗಳನ್ನು ಒಣಗಿಸಲು ಸಾಧ್ಯವಾಗುತ್ತಿಲ್ಲ. ಮನೆಯ ಬಳಿಯ ತೆಂಗಿನ ಮರಕ್ಕೆ ದಾಳಿ ಇಡುವ ಕೋತಿಗಳು ಕಾಯಿಗಳನ್ನು ಕಿತ್ತು ನಾಶಮಾಡುವುದಲ್ಲದೆ ಮನೆ ಬಳಿ ಒಣಗಲು ಹಾಕುವ ಬಟ್ಟೆಗಳನ್ನು ಹರಿದು ಹಾಕುತ್ತಿವೆ. ಕೋತಿಗಳನ್ನು ಓಡಿಸಲು ಮುಂದಾದರೆ ಏಕಾಏಕಿ ಏರಗಿ ಗಾಯಗೊಳಿಸುತ್ತಿವೆ.

ಮನೆ ಆಸುಪಾಸಿ ತೆಂಗಿನ ಮರಗಳಲ್ಲಿ ಗುಂಪು-ಗುಂಪಾಗಿ ಕೋತಿಗಳು ಕಂಡುಬರುತ್ತಿದ್ದು, ಮರದ ಕೆಳಗೆ ನಿಂತರೆ ಸಾಕು ತೆಂಗಿನ ಕಾಯಿಗಳನ್ನು ಮೇಲೆ ಬೀಳಿಸುತ್ತಿವೆ. ಬಾಗಿಲು ತೆರೆದರೆ ಮನೆಗೆ ನುಗ್ಗಿ ತಿಂಡಿ ಪದಾರ್ಥಗಳನ್ನೆಲ್ಲ ಹೋತ್ತೊಯ್ಯುತ್ತಿವೆ. ಇದರಿಂದಾಗಿ ಮನೆಯಿಂದ ಹೊರಬಾರದ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಅಲವತ್ತುಕೊಳ್ಳುತ್ತಿದ್ದಾರೆ.

ಗ್ರಾಮದಲ್ಲಿ ವರ್ಷಗಳಿಂದ ಕೋತಿಗಳಿದ್ದವು. ಆದರೆ, ಅವು ತೊಂದರೆ ನೀಡುತ್ತಿರಲಿಲ್ಲ. ಆದರೆ, 12 ದಿನಗಳ ಹಿಂದೆ ಬೇರೆಡೆಯಿಂದ ಗ್ರಾಮಕ್ಕೆ 50ಕ್ಕೂ ಹೆಚ್ಚು ಕೋತಿಗಳು ಬಂದಿದ್ದು, ಇವು ನಾಗರಿಕರ ಮೇಲೆ ಎರಗಿ ಗಾಯಗೊಳಿಸುತ್ತಿವೆ ಎಂದು ಗ್ರಾಪಂ ಸದಸ್ಯ ಜಯಣ್ಣ ಆರೋಪಿಸಿದರು.
ಕೋತಿಗಳ ಹಾವಳಿ ತಡೆಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಸ್ಪಂದನೆ ದೊರೆಯುತ್ತಿಲ್ಲ ಎಂದು ತಿಳಿಸಿದ್ದಾರೆ.
ಗ್ರಾಮದ ಸಾವಿತ್ರಮ್ಮ, ಶಿಲ್ಪ, ರೇವಮ್ಮ, ಭಾವನ, ಮಹದೇವಮ್ಮ, ಉಮಾದೇವಿ, ಪ್ರೇಮ, ಚಂದ್ರಮ್ಮ ಸೇರಿದಂತೆ 20 ಕ್ಕೂ ಹೆಚ್ಚು ಮಂದಿ ಗಾಯಗೊಂಡು ವೀರೇಗೌಡನದೊಡ್ಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಪಡೆದಿದ್ದಾರೆ.

ಕೋತಿ ಹಿಡಿಯಲು ನಮಗೆ ಅನುಮತಿ ಇಲ್ಲ. ಗ್ರಾಪಂ ಪಿಡಿಒ ಅವರೊಂದಿಗೆ ಮಾತನಾಡಲಾಗುವುದು. ನಾವು ಹಿಡಿಯಲು ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಂದ ಅನುಮತಿ ಪಡೆಯಬೇಕಿದೆ. ಚೈತ್ರಾ, ವಲಯ ಅರಣ್ಯಾಧಿಕಾರಿ