ವಿಜಯಪುರ: ಪ್ರಸಕ್ತ ಮುಂಗಾರು ಹಂಗಾಮಿನ ವೇಳೆ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಸೇರಿ ಮತ್ತಿತರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಕೃಷಿ ಆಯುಕ್ತ ವೈ.ಎಸ್. ಪಾಟೀಲ ಅವರ ಬೆಂಗಳೂರು ಕಚೇರಿಗೆ ಮಂಗಳವಾರ ಭೇಟಿ ನೀಡಿ ಮನವಿ ಸಲ್ಲಿಸಿದರು.
ಸಂದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ ಅಧಿಕೃತ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳ ಮಾರಾಟಗಾರರು ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಯಾವುದೇ ಮುಲಾಜಿಲ್ಲದೆ ಅಂಥವರ ಲೈಸೆನ್ಸ್ ರದ್ದುಗೊಳಿಸಬೇಕು ಎಂದರು.
ಬೀಜ, ಗೊಬ್ಬರ ಮತ್ತು ಕೀಟನಾಶಕಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಕೃಷಿ ಇಲಾಖೆಯಿಂದ ತಾತ್ಕಾಲಿಕವಾಗಿ ಪರವಾನಗಿ ರದ್ದುಗೊಂಡವರು ಈ ವರ್ಷವೂ ಅದೇ ರೀತಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು ಕಂಡುಬಂದರೆ ಅವರ ಪರವಾನಗಿ ಶಾಶ್ವತವಾಗಿ ರದ್ದು ಮಾಡಬೇಕೆಂದು ಆಗ್ರಹಿಸಿದರು.
ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಜಾಗೃತದಳ (ವಿಜಿಲೆನ್ಸ್) ರಚಿಸಬೇಕು. ಪ್ರತಿ ತಾಲೂಕಿನಲ್ಲಿ ಕಾರ್ಯ ಪ್ರವೃತ್ತರಾಗುವಂತೆ ಹಾಗೂ ಇಲಾಖೆ ಪರವಾನಗಿ ಪಡೆಯದೆ (ಪಿಸಿ) ಅನಧಿಕೃತ ಮತ್ತು ಕಳಪೆ ಬೀಜ, ರಸಗೊಬ್ಬರ, ಕೀಟನಾಶಕ ಮಾರಾಟ ಮಾಡುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ಸಂದ ರಾಜ್ಯ ಕಾರ್ಯಾಧ್ಯಕ್ಷ ಮಹೇಶಗೌಡ ಸುಬೇದಾರ ಮಾತನಾಡಿ, ಜಿಲ್ಲೆಯಲ್ಲಿ ಜಿ 2 ಮತ್ತು ಜಿ3 ಎಂಬ ಹೆಸರಿನಲ್ಲಿ ಪರವಾನಗಿ ಪಡೆದು (ಕೆಮಿಕಲ್ಸ್) ವಿಷ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ.
ಅವುಗಳನ್ನು ತಜ್ಞರ ಮೂಲಕ (ಲ್ಯಾಬ್ಟೆಸ್ಟ್) ತಪಾಸಣೆ ಮಾಡಿ ರೈತ ಮತ್ತು ಸರ್ಕಾರಕ್ಕಾಗುತ್ತಿರುವ ಮೋಸ ತಡೆಯಬೇಕೆಂದು ಮನವಿ ಮಾಡಿದರು.
ಮುಖಂಡ ಸಂತೋಷ ಪೂಜಾರಿ ಮಾತನಾಡಿ, ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಿಸುವ ಕೃಷಿ ಪರಿಕರಗಳು ಸಂಪೂರ್ಣ ಕಳಪೆಯಿಂದ ಕೂಡಿವೆ. ಕಳಪೆ ಪರಿಕರ ಪೂರೈಸಿದ ಕಂಪನಿಯವರನ್ನು ಕಪ್ಪು ಪಟ್ಟಿಗೆ ಸೇರಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.