ಚಿಕ್ಕಪಡಸಲಗಿ: ಗುಣಮಟ್ಟದ ಶಿಕ್ಷಣ ಮಕ್ಕಳಿಗೆ ದೊರೆತಾಗ ಮಾತ್ರ ಶೈಕ್ಷಣಿಕ ಶ್ರೇಯೋಭಿವೃದ್ಧಿ ಕಾಣಲು ಸಾಧ್ಯ ಎಂದು ಜಮಖಂಡಿ ತಾಲೂಕಿನ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಬಸಣ್ಣವರ ಹೇಳಿದರು.
ಚಿಕ್ಕಪಡಸಲಗಿ ಗ್ರಾಮದಲ್ಲಿ ಗದುಗಿನ ತೋಂಟದಾರ್ಯ ವಿದ್ಯಾಪೀಠ ಸಂಸ್ಥೆಯ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಗೆ ಗುರುವಾರ ಅನಿರೀಕ್ಷಿತ ಭೇಟಿ ನೀಡಿ ಶೈಕ್ಷಣಿಕ ವ್ಯವಸ್ಥೆ ಪರಿಶೀಲಿಸಿ ಅವರು ಮಾತನಾಡಿದರು.
ಕಲಿಕಾ ಪ್ರಕ್ರಿಯೆಯಲ್ಲಿ ಹಿಂದುಳಿದ ಮಕ್ಕಳ ಬಗ್ಗೆ ಶಿಕ್ಷಕ ಸಮೂಹ ತೀವ್ರ ಗಮನ ಹರಿಸುವ ಮೂಲಕ ವಿಶೇಷ ಪರಿಹಾರ ಬೋಧನೆ ಕೈಗೊಂಡ ಪರೀಕ್ಷಾ ಮುಖ್ಯವಾಹಿನಿಗೆ ಸನ್ನದ್ಧುಗೊಳಿಸಬೇಕೆಂದರು.
ಶಿಕ್ಷಣ ಕ್ಷೇತ್ರ ಪವಿತ್ರವಾಗಿದೆ. ಶಿಕ್ಷಕರಲ್ಲಿ ಸೂಕ್ಷ್ಮತೆಯ ಗ್ರಹಣಶಕ್ತಿ ಬೆರೆಯಬೇಕು. ಆ ಮೂಲಕ ಮಕ್ಕಳಲ್ಲಿ ಕಲಿಕಾ ಪಾಠಾಸಕ್ತಿ ಅಲಿಸುವ ಭಾವತರಂಗಗಳನ್ನು ಅರಳಿಸಬೇಕು. ಅಂತಹ ಕೌಶಲ ಹೊಂದಬೇಕು ಎಂದು ತಿಳಿಸಿದರು.
ಎಸ್‌ಎಸ್‌ಎಲ್‌ಸಿ ಮಕ್ಕಳೊಂದಿಗೆ ವಿಶೇಷ ಸಂವಾದ ನಡೆಸಿ ಶೈಕ್ಷಣಿಕ ಸ್ಥಿತಿಗತಿ ಪರಿಶೀಲಿಸಿದರು. ಮಕ್ಕಳಿಗೆ ಪರೀಕ್ಷಾ ಪೂರ್ವದ ಅರಿವು ಮೂಡಿಸಿ, ಉಪಯುಕ್ತ ಟಿಪ್ಸ್ ಸಲಹೆ ನೀಡಿದರು.
ತಾಲೂಕು ಎಸ್‌ಎಸ್‌ಎಲ್‌ಸಿ ನೋಡಲ್ ಅಧಿಕಾರಿ ಜಿ.ಎಸ್. ವಿಜಾಪೂರ ಮಾತನಾಡಿ, ಶೈಕ್ಷಣಿಕ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರು ನಿಟ್ಟಿನಲ್ಲಿ ಶಿಕ್ಷಕರು ನಿರಂತರ ಶ್ರಮಿಸಬೇಕು. ಪರೀಕ್ಷೆ ಎಂಬುದನ್ನು ಉತ್ಸವದ ರೀತಿ, ನೀತಿಯಲ್ಲಿ ಮಕ್ಕಳು ಸಂಭ್ರಮಿಸುವಂತೆ ಮಾಡಬೇಕು. ಮಾದರಿ ಪ್ರಶ್ನೋತ್ತರದ ಪತ್ರಿಕೆಗಳನ್ನು ಮಕ್ಕಳೆದುರಿಗೆ ತೆರೆದಿಟ್ಟು ಪರಿಶ್ರಮದಿಂದ ಬಿಡಿಸುವಂತೆ ಪ್ರೇರೇಪಿಸಬೇಕು ಎಂದು ತಿಳಿಸಿದರು.
ಪ್ರಭಾರಿ ಮುಖ್ಯೋಪಾಧ್ಯಾಯ ಬಸವರಾಜ ಜಾಲೋಜಿ, ಹಿರಿಯ ವಿಶ್ರಾಂತ ಶಿಕ್ಷಕ ಬಸವರಾಜ ಅನಂತಪೂರ, ಈರಪ್ಪ ದೇಸಾಯಿ, ಲೋಹಿತ ಮಿರ್ಜಿ, ಜಿ.ಆರ್. ಜಾಧವ, ಶ್ರೀಶೈಲ ಹುಣಸಿಕಟ್ಟಿ, ಸಹನಾ ಕಲ್ಯಾಣಿ, ಶೃತಿ ಲಿಗಾಡೆ ಇತರರಿದ್ದರು.