ಜಿಲ್ಲೆ

ಅಭ್ಯರ್ಥಿಗಳ ವೆಚ್ಚದ ಮೇಲೆ ನಿಗಾ ವಹಿಸಿ

ಮಂಜುನಾಥ ತಿಮ್ಮಯ್ಯ

ಮೈಸೂರು: ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಚುನಾವಣೆ ನಡೆಸಬೇಕು. ಅದಕ್ಕಾಗಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸದಂತೆ ಪ್ರತಿಯೊಂದು ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಅಭ್ಯರ್ಥಿಗಳ ವೆಚ್ಚದ ಬಗ್ಗೆ ನಿಗಾ ವಹಿಸಬೇಕು ಎಂದು ಕರ್ನಾಟಕ ರಾಜ್ಯಕ್ಕೆ ನೇಮಕವಾಗಿರುವ ವಿಶೇಷ ವೆಚ್ಚ ವೀಕ್ಷಕ ಬಿ.ಮುರಳಿಕುಮಾರ್ ಸೂಚಿಸಿದರು.


ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾ ವೆಚ್ಚ ಸಮಿತಿಯ ಅಧಿಕಾರಿಗಳು ಹಾಗೂ ಸಮಿತಿಗಳ ನೋಡಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸಿ ದಾಖಲೆ ರಹಿತ ಹಣ ಅಥವಾ ಇನ್ನಿತರ ವಸ್ತುಗಳು ಸಾಗಾಟವಾಗದಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.


ಅಧಿಕಾರಿಗಳು ನೀತಿ ಸಂಹಿತೆ ಉಲ್ಲಂಘನೆಯ ದೂರುಗಳನ್ನು ಸ್ವೀಕರಿಸಿದಾಗ ಮತ್ತು ಅವುಗಳನ್ನು ಸ್ವೀಕರಿಸಿದಾಗ ಮತ್ತು ದೂರುಗಳ ನೋಂದಣಿ ಮತ್ತು ಅವುಗಳ ಮೇಲೆ ತೆಗೆದುಕೊಂಡ ಕ್ರಮಗಳನ್ನು ನಿರ್ವಹಿಸುವಂತೆ ಸೂಚಿಸಿದರು.


ಚುನಾವಣಾ ಕೆಲಸಕ್ಕಾಗಿ ನೇಮಕವಾಗಿರುವ ಎಫ್.ಎಸ್.ಟಿ., ಎಸ್.ಎಸ್.ಟಿ, ವಿ.ವಿ.ಟಿ. ಹಾಗೂ ಇನ್ನಿತರ ತಂಡಗಳು ಜವಾಬ್ದಾರಿಯುತವಾಗಿ ಕೆಲಸ ನಡೆಸಬೇಕು. ಅಭ್ಯರ್ಥಿಯು ಚುನಾವಣಾ ಆಯೋಗ ನೀಡಿರುವ ನಿರ್ದೇಶನಗಳನ್ನು ಪಾಲಿಸುತ್ತಿರುವ ಬಗ್ಗೆ ನಿಗಾ ವಹಿಸಬೇಕು ಎಂದು ನಿರ್ದೇಶಿಸಿದರು.
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಗಳ ಚುನಾವಣಾ ವೆಚ್ಚ ನಿರ್ವಹಿಸಲು ನೇಮಕವಾಗಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.


ಚುನಾವಣಾ ಅವಧಿಯಲ್ಲಿ ಎಲ್ಲ ಬ್ಯಾಂಕ್‌ಗಳ ಮೂಲಕ ನಡೆಯಬಹುದಾದ ಅನುಮಾನಾಸ್ಪದ ವ್ಯವಹಾರಗಳು, ಹಣ ಪಡೆಯುವ ಬಗ್ಗೆ ಬ್ಯಾಂಕ್‌ಗಳು ನಿತ್ಯ ಮಾಹಿತಿ ಒದಗಿಸಬೇಕು ಎಂದು ತಿಳಿಸಿದರು.


ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ಜಿಲ್ಲೆಯಲ್ಲಿ ಚುನಾವಣಾ ಕೆಲಸಕ್ಕಾಗಿ ನೇಮಕವಾಗಿರುವ ವಿವಿಧ ತಂಡಗಳು, ಅಧಿಕಾರಿಗಳು, ಸ್ಥಾಪನೆಯಾಗಿರುವ ಚೆಕ್‌ಪೋಸ್ಟ್‌ಗಳು ಹಾಗೂ ಇನ್ನಿತರ ಮಾಹಿತಿಗಳನ್ನು ವಿವರಿಸಿದರು.


ನಂತರ ಚುನಾವಣಾ ನಿಯಂತ್ರಣ ಕೊಠಡಿ ಮತ್ತು ಮಾಧ್ಯಮ ಪ್ರಮಾಣೀಕರಣ ಮತ್ತು ನಿಗಾ ಕೇಂದ್ರವನ್ನು ವೀಕ್ಷಕರು ಪರಿಶೀಲಿಸಿದರು.


ಸಭೆಯಲ್ಲಿ ಹುಣಸೂರು, ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ವೆಚ್ಚ ವೀಕ್ಷಕ ಎ.ಸುರೇಶ್, ಚಾಮುಂಡೇಶ್ವರಿ, ಚಾಮರಾಜ, ಕೃಷ್ಣರಾಜ ಹಾಗೂ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ವೆಚ್ಚ ವೀಕ್ಷಕ ಯೋಗೇಶ್ ಮಿಶ್ರ, ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾಲಾಟ್ಕರ್, ಅಪರ ಜಿಲ್ಲಾಧಿಕಾರಿ ಪಿ.ಶಿವರಾಜು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.