ಉಡುಪಿ: ವಿಧಾನಸಭಾ ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ ಹೇಳಿ ಉದ್ಯಮಿಯೋರ್ವನಿಂದ ಏಳು ಕೋಟಿ ರೂಪಾಯಿ ಪಡೆದು ವಂಚಿಸಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರ್ತಿ ಚೈತ್ರಾ ಕುಂದಾಪುರ ಎಂಬಾಕೆಯನ್ನು ಸಿಸಿಬಿ ಪೊಲೀಸರು ಮಂಗಳವಾರ ತಡರಾತ್ರಿ ಉಡುಪಿಯಲ್ಲಿ ಬಂಧಿಸಿದ್ದಾರೆ.
ನನ್ನಿಂದ ಏಳು ಕೋಟಿ ರೂಪಾಯಿ ಪಡೆದು ವಂಚಿಸಿದ್ದಾರೆ ಎಂದು ಬೈಂದೂರು ಮೂಲದ ಉದ್ಯಮಿ ಗೋವಿಂದಬಾಬು ಪೂಜಾರಿ ಎಂಬುವರು ಪೊಲೀಸರಿಗೆ ದೂರು ನೀಡಿದ್ದರಿಂದ ಚೈತ್ರಾ ಕುಂದಾಪುರ ವಿರುದ್ಧ ಬೆಂಗಳೂರಿನಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿಯಲ್ಲಿ ಶ್ರೀಕಾಂತ ನಾಯಕ್ ಪೆಲತ್ತೂರು, ರಮೇಶ್ ಹಾಗೂ ಪ್ರಸಾದ ಬೈಂದೂರು ಎಂಬುವರನ್ನೂ ಪೊಲೀಸರು ಬಂಧಿಸಿದ್ದಾರೆ.
ಆತ್ಮಹತ್ಯೆಗೆ ಯತ್ನ?:
ಉಡುಪಿಯ ಶ್ರೀಕೃಷ್ಣ ಮಠದ ಸಮೀಪದ ವಾಹನ ಪಾರ್ಕಿಂಗ್ ಪ್ರದೇಶದಲ್ಲಿ ಬಂಧಿಸಿ, ಪೊಲೀಸ್ ವಾಹನದಲ್ಲಿ ಕರೆದೊಯ್ಯುತ್ತಿರುವಾಗ ಚೈತ್ರಾ ಆತ್ಮಹತ್ಯೆಗೆ ಯತ್ನಿಸಿದರು ಎಂದು ತಿಳಿದು ಬಂದಿದೆ. ತನ್ನ ಕೈಬೆರಳಿನಲ್ಲಿದ್ದ ಉಂಗುರ ನುಂಗಲು ಯತ್ನಿಸಿದ್ದು, ಜತೆಯಲಿದ್ದ ಪೊಲೀಸರು ತಕ್ಷಣ ತಡೆದರು ಎನ್ನಲಾಗಿದೆ. ಈ ವೇಳೆ ಚೈತ್ರಾ, ಪೊಲೀಸ್ ವಾಹನದ ಗಾಜು ಒಡೆದು, ಕೂಗಾಡಿ ಹೈಡ್ರಾಮಾ ಮಾಡಿದರು ಎಂದೂ ತಿಳಿದು ಬಂದಿದೆ.
- ತಲೆ ಮರೆಸಿಕೊಂಡಿದ್ದಳೇ?
ತಿಂಗಳ ಹಿಂದೆಯೇ ಉದ್ಯಮಿ ಗೋವಿಂದಬಾಬು ಅವರು ಪೊಲೀಸ್ ಇಲಾಖೆಯ ಮೊರೆ ಹೋಗಿದ್ದರು. ಆ ಬಳಿಕ ಚೈತ್ರಾ ಕುಂದಾಪುರ ತಲೆ ಮರೆಸಿಕೊಂಡಿದ್ದರು ಎನ್ನಲಾಗಿದೆ. ಅಲ್ಲದೆ, ಬಂಧನ ಭೀತಿಯಿಂದ ತನ್ನ ಗೆಳತಿಯಾದ ಮುಸ್ಲಿಂ ಯುವತಿಯ ಮನೆಯಲ್ಲಿ ಆಶ್ರಯ ಪಡೆದಿದ್ದರು ಎನ್ನಲಾಗಿದೆ. ತನ್ನ ಭಾಷಣದಲ್ಲಿ ಸದಾ ಮುಸ್ಲಿಮರ ವಿರುದ್ಧ ಮಾತನಾಡುತ್ತಿದ್ದ ಚೈತ್ರಾ, ಬಂಧನ ಭೀತಿಯಿಂದ ಮುಸ್ಲಿಂ ಗೆಳತಿಯ ಮನೆಯಲ್ಲಿ ರಕ್ಷಣೆ ಪಡೆದಿರುವುದು ತನಿಖೆಯ ವೇಳೆ ತಿಳಿದು ಬಂದಿದೆ.
- ಸ್ವಾಮೀಜಿ ಶಾಮೀಲು?
ಹಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರೇಹಡಗಲಿಯ ಅಭಿನವ ಹಾಲಶ್ರೀ ಸ್ವಾಮೀಜಿ ಸಹಿತ ಏಳು ಮಂದಿಯ ವಿರುದ್ಧ ಗೋವಿಂದಬಾಬು ಪೂಜಾರಿ ದೂರು ದಾಖಲಿಸಿದ್ದರಿಂದ, ಕಳೆದ ಸೆ. 8ರಂದು ಬೆಂಗಳೂರು ಬಂಡೆಪಾಳ್ಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಕಾರ್ಯಾಚರಣೆ ಕೈಗೊಂಡಿದ್ದ ಸಿಸಿಬಿ ಪೊಲೀಸರು, ಚೈತ್ರಾ ಸಹಿತ ಮೂವರು ಸಹಚರರನ್ನು ಉಡುಪಿಯಲ್ಲಿ ವಶಕ್ಕೆ ಪಡೆದು ಬೆಂಗಳೂರಿಗೆ ತೆರಳಿದ್ದಾರೆ.
- ಕಾಂಗ್ರೆಸ್ನತ್ತ ಬೊಟ್ಟು
ಹಣ ವಂಚನೆ ಪ್ರಕರಣ ಕುರಿತಂತೆ ಚೈತ್ರಾ ಬಳಿ ಪೊಲೀಸರು ವಿಚಾರಣೆ ನಡೆಸಿದರೆ, ನಾನೇನೂ ತಪು ಮಾಡಿಲ್ಲ ಎಂದು ಉತ್ತಿರಿಸಿದ್ದಾಗಿ ತಿಳಿದು ಬಂದಿದೆ. ಕಾಂಗ್ರೆಸ್ನವರು ಉದ್ದೇಶಪೂರ್ವಕವಾಗಿ ಹಿಂದುಗಳ ಮೇಲೆ ಟಾರ್ಗೆಟ್ ಮಾಡುತ್ತಿದ್ದಾರೆ. ಕಾಂಗ್ರೆಸ್ನವರಿಂದಲೇ ನನ್ನ ವಿರುದ್ಧ ಐಆರ್ ಮಾಡಿಸಿ, ನನ್ನನ್ನು ಬಂಧಿಸಿದ್ದಾರೆ ಎಂದು ಹೇಳಿದ್ದಾಗಿ ಪೊಲೀಸರ ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ.