ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ  
ಜಿಲ್ಲೆ

ಕೃಷಿಗಾಗಿ ಮೀಸಲಿಟ್ಟ ಹಣ ಗ್ಯಾರಂಟಿಗೆ ಬಳಕೆ: ಆರಗ ಜ್ಞಾನೇಂದ್ರ ಆರೋಪ

ಶಿವಮೊಗ್ಗ: ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಕೃಷಿಗಾಗಿ 10 ಸಾವಿರ ಕೋಟಿ ರೂ. ಮೀಸಲಿಟ್ಟಿತ್ತು. ಆದರೆ ಇದೀಗ ಮೀಸಲಿಟ್ಟ ಹಣದಲ್ಲಿ 5 ಸಾವಿರ ಕೋಟಿ ರೂ. ಗ್ಯಾರಂಟಿ ಯೋಜನೆಗಾಗಿ ಬಳಕೆ ಮಾಡಿಕೊಳ್ಳಲು ವರ್ಗಾವಣೆ ಮಾಡಿದೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಆರೋಪಿಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಅವರು, 2013ರಲ್ಲಿ ಅಧಿಕಾರಕ್ಕೆ ಬಂದಿದ್ದ ಸಿದ್ದರಾಮಯ್ಯ ಅವರು ಕೃಷ್ಣಾ ಯೋಜನೆಗೆ ಪ್ರತಿ ವರ್ಷ 10 ಸಾವಿರ ರೂ. ನೀಡುತ್ತೇವೆ ಎಂದಿದ್ದರು. ಆದರೆ 5 ವರ್ಷದಲ್ಲಿ ಎಲ್ಲ ನೀರಾವರಿ ಯೋಜನೆಗಳು ಸೇರಿ ಒಟ್ಟಾರೆ 50 ಸಾವಿರ ಕೋಟಿ ರೂ. ಕೂಡ ನೀಡಲಿಲ್ಲ ಎಂದು ಕಿಡಿಕಾರಿದರು. ಎಪಿಎಂಸಿ ಕಾಯ್ದೆ ತೆಗೆದು ರೈತನಿಗೆ ತಾನು ಬೆಳೆದ ಬೆಳೆಗೆ ತಾನೇ ಮಾರುವ ಹಕ್ಕನ್ನು ಕಸಿದುಕೊಂಡಿದ್ದಾರೆ. ರೈತರ ಯಂತ್ರೋಪಕರಣ ಸಹಾಯಧನವನ್ನು ನಿಲ್ಲಿಸಿದ್ದಾರೆ. ಸಾವಿರಾರು ಎಕರೆ ಅಡಕೆ ತೋಟಕ್ಕೆ ಎಲೆಚುಕ್ಕಿ ರೋಗ ಬಂದರೂ ರೈತರು ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದರೂ ತೀರ್ಥಹಳ್ಳಿಯ ಅಡಕೆ ಸಂಶೋಧನಾ ಕೇಂದ್ರಕ್ಕೆ ಬಿಜೆಪಿ ಸರ್ಕಾರ ನೀಡಿದ 10 ಕೋಟಿ ರೂ. ತಡೆಹಿಡಿದಿದ್ದಾರೆ. ಉಚಿತ ಬಸ್ ಗ್ಯಾರಂಟಿ ನೀಡಿದ ಸರ್ಕಾರ ನಿಗಮಕ್ಕೆ 750 ಕೋಟಿಯಲ್ಲಿ ಕೇವಲ 120 ಕೋಟಿ ರೂ. ನೀಡಿದೆ. ವಿವಿಧ ಎಸ್ಕಾಂಗಳಿಂದ ಕೆಪಿಸಿಸಿಗೆ ಸಾವಿರಾರು ಕೋಟಿ ಬಾಕಿ ಇದೆ ಎಂದರು.
ಕಲ್ಲಿದ್ದಲು ನಿಗಮಕ್ಕೆ ಒಂದು ಸಾವಿರ ಕೋಟಿ ಬಾಕಿ ಇದ್ದು, ಅವರು ಸರಬರಾಜು ನಿಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ವಿದ್ಯುತ್ ಅಭಾವ ಕಾಡಲಿದೆ. ಅಧಿಕಾರದ ಆಸೆಗಾಗಿ ಆರ್ಥಿಕ ವ್ಯವಸ್ಥೆಯನ್ನೇ ಬಲಿಕೊಟ್ಟಿದ್ದಾರೆ. ನಾಲಿಗೆ ಭ್ರಷ್ಟ ಸರ್ಕಾರ ಇದಾಗಿದ್ದು, ಎರಡು ತಿಂಗಳಿಂದ ಅನೇಕ ಇಲಾಖೆಯ ಸರ್ಕಾರಿ ನೌಕರರಿಗೆ ಸಂಬಳ ಇಲ್ಲ. ಡಯಾಲಿಸಿಸ್ ಸೆಂಟರ್‌ಗಳನ್ನು ಮುಚ್ಚಲಾಗುತ್ತಿದೆ. 108 ಅಂಬ್ಯುಲೆನ್ಸ್ ನಿಲ್ಲುವ ಹಂತಕ್ಕೆ ತಲುಪಿದೆ. ಟ್ರಾನ್ಸ್‌ರ್ ಏಜೆಂಟರ್‌ಗಳ ದಂಡೇ ಸರ್ಕಾರದ ಸುತ್ತಲಿದ್ದು, ಹಸಿದ ಹೆಬ್ಬುಲಿಗಳಂತಾಗಿದ್ದಾರೆ. ಜನರನ್ನೇ ತಿಂದುಬಿಡುವ ಹಂತಕ್ಕೆ ಸರ್ಕಾರ ತಲುಪದ್ದು, ಜನರಿಗೆ ಎಲ್ಲವೂ ತಿಳಿಯುತ್ತಿದೆ.ಸರ್ಕಾರ ಇಳಿಯುವವರೆಗೆ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದರು.