ಬ್ಯಾಂಕ್ ಖಾತೆಗಳಲ್ಲಿ ಹಣ ಡ್ರಾ ಮಾಡಿಕೊಳ್ಳಲು ರೈತರಿಗೆ ಅಡ್ಡಿಪಡಿಸುತ್ತಿರುವ ಹೊನ್ನಾಳಿ ಎಸ್‌ಬಿಐ ವ್ಯವಸ್ಥಾಪಕರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಎನ್‌ಎಸ್‌ಯುಐ ಮುಖಂಡ ದರ್ಶನ್ ಬಳ್ಳೇಶ್ವರ ಮನವಿ ಸಲ್ಲಿಸಿದರು. 
ಜಿಲ್ಲೆ

ಹಣ ಡ್ರಾ ಮಾಡಲು ರೈತರಿಗೆ ನಿರಾಕರಣೆ

Davanagere

ಹೊನ್ನಾಳಿ: ತಮ್ಮ ಖಾತೆಯಲ್ಲಿರುವ ಹಣ ಪಡೆಯಲು ಹೋದ ರೈತರಿಗೆ ಬ್ಯಾಂಕ್ ಸಿಬ್ಬಂದಿ ಅಡ್ಡಿಪಡಿಸುತ್ತಿದ್ದಾರೆ ಎಂದು ಎನ್‌ಎಸ್‌ಯುಐ ಮುಖಂಡ ದರ್ಶನ್ ಬಳ್ಳೇಶ್ವರ ಆಪಾದಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಇತ್ತೀಚೆಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.

ನ್ಯಾಮತಿ ರಸ್ತೆಯ ಎಸ್‌ಬಿಐ ಬ್ಯಾಂಕ್‌ನಲ್ಲಿ ಹಣ ಡ್ರಾ ಮಾಡಲು ನಿರಾಕರಿಸುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಕೊರೊನಾ ಸೋಂಕು ತಡೆಗೆ ದೇಶವೇ ಲಾಕ್‌ಡೌನ್ ಆಗಿದೆ. ಎಲ್ಲರೂ ಮನೆಯಲ್ಲೇ ಇರಬೇಕಾದ ಕಾರಣ ಜನರಿಗೆ ದುಡಿಮೆ, ಆದಾಯ ಇಲ್ಲವಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಬ್ಯಾಂಕ್‌ಗಳು ಮೂರು ತಿಂಗಳವರೆಗೆ ಸಾಲದ ಇಎಂಐ ಕೇಳುವಂತಿಲ್ಲ ಎಂಬ ಆದೇಶವಿದೆ. ಇಷ್ಟಾದರೂ ಹೊನ್ನಾಳಿಯ ಎಸ್‌ಬಿಐ ವ್ಯವಸ್ಥಾಪಕ ಹಣ ಪಡೆಯಲು ಅವಕಾಶ ನೀಡದೆ ರೈತರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ದೂರಿದರು.

ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಬ್ಯಾಂಕ್ ವ್ಯವಸ್ಥಾಪಕರಿಂದ ಮಾಹಿತಿ ಪಡೆದು ಸೂಕ್ತ ನಿರ್ದೇಶನ ನೀಡುವುದಾಗಿ ಭರವಸೆ ನೀಡಿದರು.

ಎನ್‌ಎಸ್‌ಯುಐ ತಾಲೂಕು ಅಧ್ಯಕ್ಷ ಮನೋಜ್, ಪದಾಧಿಕಾರಿಗಳಾದ ಜಯರಾಮ್, ಶ್ರೀಧರ್ ಅಪ್ಪಿನಕಟ್ಟೆ, ಸುರೇಶ್, ಪ್ರಮೋದ್, ಸಂಜು, ಸುಜಯ್, ಶಂಕರ್, ಗಣೇಶ್, ರಾಜೇಶ್ ಇತರರಿದ್ದರು.