ಶಿಕಾರಿಪುರ: ಮಠ, ಮಂದಿರಗಳು ಜನರಿಗೆ ಭಕ್ತಿ ಭಾವನೆ ತುಂಬುವ ಕೇಂದ್ರಗಳಾಗಬೇಕು. ಮಠ, ಮಂದಿರಗಳ ಸಂರಕ್ಷಣೆ ಮಾಡಿದಾಗ ಸಮಾಜದ ರಕ್ಷಣೆ ಮಾಡಿದಂತಾಗುತ್ತದೆ ಎಂದು ಬೆಕ್ಕಿನಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ತಾಲೂಕಿನ ಕಡೇನಂದಿಹಳ್ಳಿಯ ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದಲ್ಲಿ ಜರುಗಿದ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಅಪಾರ ಭಕ್ತರ ಸಂಪತ್ತನ್ನು ಹೊಂದಿದ ಮಠಗಳೇ ನಿಜವಾದ ಶ್ರೀಮಂತ ಮಠಗಳು ಎಂದರು.
ಬೆಂಗಳೂರಿನ ಹಾರಿಕಾ ಮಂಜುನಾಥ ಮಾತನಾಡಿದರು. ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ತೊಗರ್ಸಿ ಪಂಚವಣ್ಣಿಗೆ ಮಠದ ಶ್ರೀ ಚನ್ನವೀರದೇಶಿಕೇಂದ್ರ ಶಿವಾಚಾರ್ಯರು, ಹಂಪಸಾಗರದ ಶ್ರೀ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯರು, ಗೇರುಕೊಪ್ಪದ ಶ್ರೀ ಶಿವಲಿಂಗ ಸ್ವಾಮೀಜಿ, ತಾಳಗುಪ್ಪದ ಶ್ರೀ ಸಿದ್ಧವೀರ ಸ್ವಾಮೀಜಿ, ಶಿರಾಳಕೊಪ್ಪದ ಶ್ರೀ ಸಿದ್ಧೇಶ್ವರ ಸ್ವಾಮೀಜಿ, ಭರತನೂರಿನ ಶ್ರೀ ಷಡಕ್ಷರಿ ದೇಶಿಕರು, ಕಡೇನಂದಿಹಳ್ಳಿಯ ಶ್ರೀ ವೀರಭದ್ರ ಶಿವಾಚಾರ್ಯರು, ಹಾರನಹಳ್ಳಿಯ ಶ್ರೀ ಶಿವಯೋಗಿ ಶಿವಾಚಾರ್ಯರು ಉಪಸ್ಥಿತರಿದ್ದರು. ಕಡೇನಂದಿಹಳ್ಳಿ ಶಿಕ್ಷಕಿ ಕರಬಸಮ್ಮ ನಿರೂಪಿಸಿದರು.