ಜಿಲ್ಲೆ

ಇ-ಸ್ಪರ್ಶಕ್ಕೆ ಸೇರಲಿ ಮೊಳಕಾಲ್ಮೂರು-ರಾಂಪುರ ಆಸ್ಪತ್ರೆ

ಕೆ. ಕೆಂಚಪ್ಪ ಮೊಳಕಾಲ್ಮೂರು: ಮೊಳಕಾಲ್ಮೂರು, ರಾಂಪುರ ಸಾರ್ವಜನಿಕ ಆಸ್ಪತ್ರೆಗಳನ್ನು ಮೊದಲ ಪಟ್ಟಿಯಲ್ಲೇ ಇ-ಸ್ಪರ್ಶ ಯೋಜನೆಗೆ ಸೇರಿಸಿ ಬಡ ಜನರ ಆರೋಗ್ಯಕ್ಕೆ ರಕ್ಷಣೆ ಒದಗಿಸುವಂತೆ ಸಾರ್ವಜನಿಕರು, ಪ್ರಗತಿಪರ ಸಂಘಟನೆಗಳು ಸರ್ಕಾರವನ್ನು ಒತ್ತಾ ಯಿಸಿವೆ.

ಜನರ ಆರೋಗ್ಯ ದೃಷ್ಟಿಯಿಂದ ರಾಜ್ಯದ 122 ತಾಲೂಕು ಆಸ್ಪತ್ರೆ, 50 ಸಮುದಾಯ ಆರೋಗ್ಯ ಕೇಂದ್ರ ಮತ್ತು ಮೂರು ತಾಯಿ-ಮಕ್ಕಳ ಆಸ್ಪತ್ರೆಗಳಿಗೆ ಇ-ಆಸ್ಪತ್ರೆ ಸ್ಪರ್ಶ ನೀಡಲು ರಾಜ್ಯಸರ್ಕಾರ ಈಗಾಗಲೇ ನಿರ್ಧರಿಸಿದೆ.

ಮೊದಲ ಹಂತದಲ್ಲಿ ಜಿಲ್ಲಾಸ್ಪತ್ರೆಗಳಲ್ಲಿ ಮಾತ್ರ ಯೋಜನೆ ಅನುಷ್ಠಾನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು ತಾಲೂಕು ಕೇಂದ್ರಗಳಿಗೂ ಇದನ್ನು ವಿಸ್ತರಿಸುವಂತೆ ಒತ್ತಾಯ ಕೇಳಿ ಬಂದಿದೆ.

ವಿಶೇಷವಾಗಿ ತಾಲೂಕಿನ ರಾಂಪುರ ಮತ್ತು ಮೊಳಕಾಲ್ಮೂರು ಸಾರ್ವಜನಿಕ ಆಸ್ಪತ್ರೆಗಳನ್ನು ಸೇರ್ಪಡೆಗೊಳಿಸಲು ಆರೋಗ್ಯ ಸಚಿವರು ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಆಗ್ರಹಿಸಲಾಗಿದೆ.

ಈ ಭಾಗದ ಜನರು ಆರೋಗ್ಯ ಸಮಸ್ಯೆಗಳಿಗೆ ದೂರದ ಬಳ್ಳಾರಿ, ಚಿತ್ರದುರ್ಗಕ್ಕೆ ಹೋಗುವ ಅನಿವಾರ್ಯತೆ ಇದೆ. ಹೀಗಾಗಿ ತಾಲೂಕು ಕೇಂದ್ರ ಮತ್ತು ರಾಂಪುರ ಸಾರ್ವಜನಿಕ ಆಸ್ಪತ್ರೆಗಳನ್ನು ಇ-ಸ್ಪರ್ಶ ಯೋಜನೆಯ ಮೊದಲ ಪಟ್ಟಿಗೆ ಸೇರಿಸಿ ಅಗತ್ಯ ಆರೋಗ್ಯ ಸೇವೆ ಒದಗಿಸಬೇಕೆಂದು ಮನವಿ ಮಾಡಿದ್ದಾರೆ.

ಜನರ ಆರೋಗ್ಯ ರಕ್ಷಣೆ ಆದ್ಯತೆಯಾಗಲಿ: 50 ವರ್ಷಗಳ ನಂತರ ಮೊಳಕಾಲ್ಮೂರು ಕ್ಷೇತ್ರದ ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿದೆ. ತಾಲೂಕಿನ ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರದ ಬದಲಾವಣೆಗೆ ಮೊದಲ ಆದ್ಯತೆ ನೀಡಬೇಕೆಂದು ಜನಸಂಸ್ಥಾನ ಸಂಸ್ಥೆ ಕಾರ್ಯದರ್ಶಿ ವಿರೂಪಾಕ್ಷಪ್ಪ, ಸಿಪಿಐ ತಾಲೂಕು ಕಾರ್ಯದರ್ಶಿ ಮಹಮದ್ ಜಾಫರ್ ಮನವಿ ಮಾಡಿದ್ದಾರೆ.